ಕರ್ನಾಟಕ ಕಾಂಗ್ರೆಸ್ ಚಟುವಟಿಕೆ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಹಿತಿ ಪಡೆದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿ ಜೊತೆ ಸಂಪರ್ಕದಲ್ಲಿದ್ದು, ಅವರು ಒಂದು ಸಾಲಿನ ಸಂದೇಶವನ್ನು ಕಳಿಸಿದ್ದಾರೆ.
ನವೆಂಬರ್ 28 ಅಥವ 29ರಂದು ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಭೇಟಿಯಾಗಲಿದ್ದಾರೆ ಎಂದು ದೆಹಲಿ ಮೂಲಗಳು ಹೇಳಿವೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಹೈಕಮಾಂಡ್ ನಾಯಕರ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯ ರಾಜಕೀಯದ ಕುರಿತು ಚರ್ಚಿಸಲಾಗುತ್ತದೆ.
ರಾಹುಲ್ ಗಾಂಧಿ ಸಂದೇಶ: ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಹುಲ್ ಗಾಂಧಿ ಒಂದು ಸಾಲಿನ ಸಂದೇಶವನ್ನು ಕಳಿಸಿದ್ದು, ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮೇಲೆ ಇಟ್ಟಿರುವ ಭರವಸೆ ಇಮ್ಮಡಿಗೊಳಿಸಿದೆ.
‘ವೈಟ್ ಐ ವಿಲ್ ಕಾಲ್ ಯು’ ಎಂದು ರಾಹುಲ್ ಗಾಂಧಿ ಡಿ.ಕೆ.ಶಿವಕುಮಾರ್‌ಗೆ ಸಂದೇಶವನ್ನು ಕಳಿಸಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಇಬ್ಬರನ್ನು ಕಡೆಗಣಿಸುವ ಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ.
ಆದ್ದರಿಂದ ಕರ್ನಾಟಕ ಕಾಂಗ್ರೆಸ್‌ನ ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಸೂಕ್ತವಾದ ಸಂಧಾನ ಸೂತ್ರವನ್ನು ಸಿದ್ಧಪಡಿಸುತ್ತಿದೆ. ಯಾವುದೇ ಕ್ಷಣದಲ್ಲಿ ದೆಹಲಿಗೆ ಬರುವಂತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಕರೆ ಬರುವ ನಿರೀಕ್ಷೆ ಇದೆ.
ದಕ್ಷಿಣ ಭಾರತದಲ್ಲಿಯೇ ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವ ರಾಜ್ಯ ಕರ್ನಾಟಕ. ಆದ್ದರಿಂದ ಇಲ್ಲಿ ನಾಯಕತ್ವ ವಿಚಾರದಲ್ಲಿ ಗೊಂದಲಗಳು ಉಂಟಾಗಿ ಅದು ಮುಂದಿನ ಚುನಾವಣೆಗಳ ಮೇಲೆ ಪ್ರಭಾವ ಬೀರಬಾರದು ಎಂದು ರಾಹುಲ್ ಗಾಂಧಿ ತಮ್ಮನ್ನು ಭೇಟಿಯಾದ ರಾಜ್ಯದ ನಾಯಕರಿಗೆ ಸೂಚನೆ ನೀಡಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು ರಾಹುಲ್ ಗಾಂಧಿಗೆ ಡಿ.ಕೆ.ಶಿವಕುಮಾರ್ ಮನವೊಲಿಕೆ ಜವಾಬ್ದಾರಿಯನ್ನು ನೀಡಿದ್ದಾರೆ.
ಪಕ್ಷ ನಿಷ್ಠವಾಗಿರುವ ಡಿ.ಕೆ.ಶಿವಕುಮಾರ್ ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಸ್ವತಃ ರಾಹುಲ್ ಗಾಂಧಿ ಡಿ.ಕೆ.ಶಿವಕುಮಾರ್ ಸಂಪರ್ಕ ಮಾಡಿ ಸಂದೇಶ ಕಳಿಸಿದ್ದಾರೆ. ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಭೇಟಿ ಯಾವಾಗ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದು ಮಾಹಿತಿ ಪ್ರಕಾರ ಮುಂದಿನ ಬಜೆಟ್ ನಾನೇ ಮಂಡನೆ ಮಾಡುತ್ತೇನೆ ಎಂದು ಹೇಳಿರುವ ಹಣಕಾಸು ಸಚಿವರು ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಸಂಪುಟ ಪುನಾರಚನೆ ಮಾಡೋಣ, ನಾಯಕತ್ವ ಬದಲಾವಣೆ ಕುರಿತು ಮಾರ್ಚ್ ಬಳಿಕ ತೀರ್ಮಾನ ಕೈಗೊಳ್ಳೋಣ. ಈ ಕುರಿತು ಡಿ.ಕೆ.ಶಿವಕುಮಾರ್ ಮನವೊಲಿಕೆ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯಗೆ ಶಾಸಕರ ಬೆಂಬಲವಿದೆ. ಅಲ್ಲದೇ ಪ್ರಭಾವಿ ನಾಯಕನನ್ನು ಪದತ್ಯಾಗ ಮಾಡುವಂತೆ ಸೂಚನೆ ನೀಡಿದರೆ ಪಕ್ಷದ ಮೇಲೆ ಆಗುವ ಪರಿಣಾಮವನ್ನು ರಾಹುಲ್ ಗಾಂಧಿ ತಿಳಿದಿದ್ದಾರೆ. ಆದ್ದರಿಂದ ಅವರು ಸಹ ಸಿದ್ದರಾಮಯ್ಯ ಪರವಾಗಿದ್ದಾರೆ ಎಂಬ ಮಾಹಿತಿ ಇದೆ.
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ವಿಚಾರದಲ್ಲಿ ಈಗ ಇಕ್ಕಟ್ಟಿಗೆ ಸಿಲುಕಿದೆ. 2023ರಲ್ಲಿ ಚುನಾವಣೆ ಮುಗಿದಾಗ ಯಾರನ್ನು ಸಿಎಂ ಮಾಡಬೇಕು ಎಂದು ತೀರ್ಮಾನಿಸಲು ಒಂದು ವಾರ ದೆಹಲಿಯಲ್ಲಿ ಸರಣಿ ಸಭೆಯನ್ನು ನಡೆಸಲಾಗಿತ್ತು.
ಅಧಿಕಾರಿ ಹಂಚಿಕೆ ಸೂತ್ರದ ಕುರಿತು ಈಗಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಎಂದಾದರೂ ಸಹ ಇದು ರಾಜ್ಯದಲ್ಲಿ ಮತ್ತೆ ಚರ್ಚೆಗೆ ಬರಲಿದೆ ಎಂಬುದನ್ನು ಹೈಕಮಾಂಡ್ ಸಹ ತಿಳಿದಿದೆ. ಆದ್ದರಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರನ್ನು ದೆಹಲಿಗೆ ಕರೆಸಿ ಸಂಧಾನ ಸಭೆ ನಡೆಸುವ ತೀರ್ಮಾನವನ್ನು ಹೈಕಮಾಂಡ್ ಮಾಡಿದೆ.
ಆದರೆ ಇದಕ್ಕೂ ಮೊದಲು ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಿರಿಯ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಬಳಿಕ ತಮ್ಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


