ಕರ್ನಾಟಕ ಕಾಂಗ್ರೆಸ್‌ನ ಬೆಳವಣಿಗೆಗಳ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಮತ್ತೆ ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಶುಕ್ರವಾರದಿಂದ ನಗರದಲ್ಲಿಯೇ ಇದ್ದ ಅವರು ಮಂಗಳವಾರ ದೆಹಲಿಗೆ ವಾಪಸ್ ಆಗಿದ್ದರು.
ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ, ಶಾಸಕರ ದೆಹಲಿ ಭೇಟಿ, ಸಚಿವರು ಡಿನ್ನರ್ ಮೀಟಿಂಗ್ ಹೀಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ಬೆಳವಣಿಗೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಎಲ್ಲವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಗುರುವಾರ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಟ್ಟದ ನಾಯಕರ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕರ್ನಾಟಕದ ವಿಚಾರದ ಕುರಿತು ವಿವರವಾದ ಚರ್ಚೆ ನಡೆಯುವ ಸಾಧ್ಯತೆ ಇದ್ದು, ತೀರ್ಮಾನ ಕುತೂಹಲಕ್ಕೆ ಕಾರಣವಾಗಿದೆ.
ಗುರುವಾರದ ಸಭೆಯತ್ತ ಚಿತ್ತ: ಗುರುವಾರ ಬೆಳಗ್ಗೆ ಮಲ್ಲಿಕಾರ್ಜುನ ಖರ್ಗೆ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರು ನಗರಕ್ಕೆ ಬರಲಿದ್ದಾರೆ. ಅವರು ಮಧ್ಯಾಹ್ನ 1 ಗಂಟೆಗೆ ವಾಪಸ್ ಆಗಲಿದ್ದು, ದೆಹಲಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದೆ.
ಬಿಹಾರ ವಿಧಾನಸಭೆ ಚುನಾವಣೆ 2025ರಲ್ಲಿ ಕಾಂಗ್ರೆಸ್ ಪಕ್ಷ 6 ಸೀಟುಗಳಲ್ಲಿ ಗೆಲ್ಲುವ ಮೂಲಕ ಹೀನಾಯ ಸೋಲು ಕಂಡಿದೆ. ಈ ಸೋಲಿನ ಕುರಿತು ಪರಾಮರ್ಶೆ ನಡೆಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹೈಕಮಾಂಡ್ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ. ಬಿಹಾರದ ವಿಚಾರ ಚರ್ಚೆಯಾದ ಬಳಿಕ ರಾಹುಲ್ ಗಾಂಧಿ ಕರ್ನಾಟಕದ ವಿಚಾರದ ಕುರಿತು ಚರ್ಚಿಸಿದ್ದಾರೆ.
ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯದ ವರದಿಯನ್ನು ರಾಹುಲ್ ಗಾಂಧಿಗೆ ಸಲ್ಲಿಕೆ ಮಾಡಿದ್ದಾರೆ. ಕೆ.ಸಿ.ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಜೊತೆಗೆ ರಾಹುಲ್ ಗಾಂಧಿ ರಾಜ್ಯ ರಾಜಕೀಯದ ಅಪ್‌ಡೇಟ್ ಪಡೆದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ಹಸ್ತಾಂತರಕ್ಕಾಗಿ ಪಟ್ಟು ಹಿಡಿದಿದ್ದಾರೆ. ಅಧಿಕಾರ ಹಸ್ತಾಂತರವಾಗುವ ತನಕ ಸಂಪುಟ ಪುನರ್ ರಚನೆ ಬೇಡ ಎಂದು ಹೇಳಿದ್ದಾರೆ. ಅತ್ತ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಮನವೊಲಿಕೆ ಮಾಡಿ ಸಂಪುಟ ಪುನಾರಚನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಬಳಿಕ ಬೇಡಿಕೆ ಇಟ್ಟಿದ್ದಾರೆ.
ಶನಿವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿದ್ದರು. ಮಂಗಳವಾರ ಖರ್ಗೆ ಮತ್ತು ಡಿ.ಕೆ.ಶಿವಕುಮಾರ್ ಒಂದೇ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈಗ ಗುರುವಾರ ಖರ್ಗೆ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಬುಧವಾರ ರಾತ್ರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದರು. ಈ ಭೇಟಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ.
ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಬಣ ರಾಜಕೀಯಕ್ಕೆ ತಡೆ ಹಾಕಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕರೆದಿದ್ದ ಸಚಿವರು, ಶಾಸಕರ ಭೋಜನ ಕೂಟ ಕೈಬಿಡುವಂತೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ನವೆಂಬರ್ 26ರಂದು ಸಂಜೆ ಸಿದ್ದರಾಮಯ್ಯ ಬಣದ ಶಾಸರು ಡಿನ್ನರ್ ಸಭೆ ಕರೆದಿದ್ದರು. ಈ ಸಭೆಯನ್ನು ನಡೆಸಬಾರದು. ಎಲ್ಲಾ ನಾಯಕರು ಹೈಕಮಾಂಡ್ ಹೇಳಿದಂತೆ ಕೇಳೋಣ ಎಂಬ ಸಂದೇಶವನ್ನು ಸಿದ್ದರಾಮಯ್ಯ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯದ ಮಾಹಿತಿ ಪ್ರಕಾರ ಮುಂದಿನ ವಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ದೆಹಲಿಗೆ ಬರುವಂತೆ ಬುಲಾವ್ ಬರಲಿದೆ. ಉಭಯ ನಾಯಕರ ಜೊತೆ ಹೈಕಮಾಂಡ್ ನಾಯಕರು ಸಂಧಾನ ಸಭೆಯನ್ನು ನಡೆಸಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


