ಮೈಸೂರು: ಜಿಲ್ಲೆಯ ಟಿ.ನರಸೀಪುರದಲ್ಲಿರುವ ಕಾವೇರಿ, ಕಪಿಲಾ ನದಿ ಹಾಗೂ ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದ ಪುಣ್ಯ ಕ್ಷೇತ್ರವಾದ ತಿರುಮಕೂಡಲಿನಲ್ಲಿ 12ನೇ ಮಹಾಕುಂಭಮೇಳವನ್ನು 2025ರ ಫೆಬ್ರವರಿ 10 ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರು ವರ್ಷಗಳ ಬಳಿಕ ಜರುಗುತ್ತಿರುವ ದಕ್ಷಿಣದ ಪ್ರಯಾಗರಾಜ್ ಎಂದೇ ಖ್ಯಾತಿಗಳಿಸಿರುವ ತಿರುಮಲಕೂಡಲಿನಲ್ಲಿ 12ನೇ ಮಹಾಕುಂಭಮೇಳವೂ 2025ರ ಫೆಬ್ರವರಿ 10ರಿಂದ ನಡೆಯಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಈಗಿನಿಂದಲೇ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಠಾಧೀಶರ ಬಳಗ ಪೂರ್ವಸಿದ್ಧತೆಯನ್ನು ಆರಂಭಿಸಿದೆ ಎಂದು ಮಾಹಿತಿ ನೀಡಿದರು.
ಈ ಮಹಾಕುಂಭ ಮೇಳವನ್ನು ಪ್ರತಿ 3 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತಿದ್ದು, ಈ ಮುಂಚೆ ಕಳೆದ 2019ರಲ್ಲಿ ಕಾರ್ಯಕ್ರಮ ಜರುಗಿತ್ತು. ಬಳಿಕ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಹಾಕುಂಭಮೇಳವನ್ನು ರದ್ದುಗೊಳಿಸಿದ ಕಾರಣ ಅಯೋಜನೆ ಮಾಡಿರಲಿಲ್ಲ. ಆದರೆ ಇದೀಗ 2025ರ ಫೆಬ್ರವರಿಯಲ್ಲಿ ಆಯೋಜನೆ ಮಾಡಲಾಗುತ್ತಿದ್ದು, ಸಿದ್ಧತೆಯ ಕುರಿತು ಚರ್ಚಿಸಲಾಗಿದೆ. ಅಲ್ಲದೇ ಸಕಲ ಸಿದ್ಧತೆಯ ಜವಾಬ್ದಾರಿಯನ್ನು ಹಂಚಿಕೆ ಮಾಡುವುದರ ಜೊತೆಗೆ ರಾಜ್ಯ ಸರ್ಕಾರದ ಸಹಕಾರವನ್ನು ಕೋರಲಾಗಿದೆ ಎಂದು ಹೇಳಿದರು.
ಇನ್ನು 12ನೇ ಮಹಾಕುಂಭಮೇಳದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ, ಮಹಾಕುಂಭಮೇಳ ಜರುಗುವ ಸ್ಥಳಕ್ಕೆ ಶೀಘ್ರದಲ್ಲೇ ಭೇಟಿ ಮಾಡಿ, ಸ್ಥಳ ಪರಿಶೀಲಿಸಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂಬುದನ್ನು ಚರ್ಚಿಸಬೇಕು. ಅಲ್ಲದೇ ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


