ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ನವೆಂಬರ್ 24ರಂದು ನಿವೃತ್ತರಾಗಲಿದ್ದಾರೆ. ಆದ್ದರಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮುಂದಿನ ಸಿಜೆಐ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಇವರ ಹೆಸರನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ನ್ಯಾಯಮೂರ್ತಿ ಬಿ.ಆರ್. ಗವಾಯಿ ಶಿಫಾರಸು ಮಾಡಿದ್ದಾರೆ.
ಬಿ.ಆರ್.ಗವಾಯಿ ಬಳಿಕ ನ್ಯಾಯಮೂರ್ತಿ ಸೂರ್ಯಕಾಂತ್ ಸುಪ್ರೀಂಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಗಳು. ಆದ್ದರಿಂದ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಕೇಂದ್ರ ಕಾನೂನು ಸಚಿವಾಲಯ ಅಂತಿಮ ಆದೇಶ ಹೊರಡಿಸಿದ ಬಳಿಕ ನ್ಯಾಯಮೂರ್ತಿ ಸೂರ್ಯಕಾಂತ್ ನೇಮಕದ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ.
ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 24ರಿಂದ ನ್ಯಾಯಮೂರ್ತಿ ಸೂರ್ಯಕಾಂತ್ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಕಳೆದ ವಾರವೇ ಕೇಂದ್ರ ಕಾನೂನು ಸಚಿವಾಲಯ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪತ್ರವೊಂದನ್ನು ಬರೆದಿತ್ತು. ಮುಂದಿನ ಮುಖ್ಯ ನ್ಯಾಯಮೂರ್ತಿ ಹೆಸರು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿತ್ತು.
ನ್ಯಾ. ಸೂರ್ಯಕಾಂತ್ ಪರಿಚಯ: ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಫೆಬ್ರವರಿ 10, 1962ರಲ್ಲಿ ಜನಿಸಿದರು. ಪದವಿ ಪೂರ್ಣಗೊಳಿಸಿದ ಬಳಿಕ ಅವರು ಕಾನೂನು ವಿಷಯದಲ್ಲಿ 1984ರಲ್ಲಿ ರಾಜ್‌ಕೋಟ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.
ಹಿಸಾರ್ ಜಿಲ್ಲೆಯಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಅವರು ಬಳಿಕ ಚಂಡೀಗಢ್‌ಗೆ ಸ್ಥಳಾಂತರಗೊಂಡರು. 1985ರಲ್ಲಿ ಅವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಮುಂದುವರೆಸಿದರು. ಸಿವಿಲ್ ಕೇಸುಗಳನ್ನು ಪ್ರತಿನಿಧಿಸುವ ಅವರು ಹಲವಾರು ವಿಶ್ವವಿದ್ಯಾಲಯಳು, ಬ್ಯಾಂಕ್, ಸಂಸ್ಥೆಗಳ ಕೇಸುಗಳನ್ನು ನಡೆಸಿದ್ದಾರೆ.
ಜುಲೈ 7, 2000ದಲ್ಲಿ ವರು ಹರ್ಯಾಣ ಹೈಕೋರ್ಟ್‌ನ ಅತಿ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು. 2001ರಲ್ಲಿ ಹಿರಿಯ ವಕೀಲರಾದರು. ಜನವರಿ 9, 2004ರಲ್ಲಿ ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾದರು. 2018ರಲ್ಲಿ ಅವರು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.
ನ್ಯಾಯಮೂರ್ತಿ ಸೂರ್ಯಕಾಂತ್ ಮೇ 24, 2019ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಫೆಬ್ರವರಿ 9, 2027ರಲ್ಲಿ ನಿವೃತ್ತರಾಗಲಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


