Tuesday, November 3, 2026
spot_img
More
    spot_img
    HomeLatest newsರೈತರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ

    ರೈತರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ

    ಕರ್ನಾಟಕದಲ್ಲಿ ಈ ಬಾರಿ ನೈಋತ್ಯ ಮುಂಗಾರು ಮಳೆ ಅಪಾರವಾದ ಹಾನಿಯನ್ನು ಮಾಡಿದೆ. 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಈಗ ಕರ್ನಾಟಕ ಸರ್ಕಾರ ಬೆಳೆ ಕಳೆದುಕೊಂಡ ರೈತರ ನೆರವಿಗೆ ಬಂದಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮುಂಗಾರು ಮಳೆಯಿಂದಾಗಿ ಬೆಳೆ ಹಾನಿಗೆ ಒಳಗಾದ ರೈತರ ಖಾತೆಗಳಿಗೆ ಇನ್ ಪುಟ್ ಸಬ್ಸಿಡಿ ವಿತರಿಸಲು ಚಾಲನೆ ನೀಡಿದರು. ಹಲವು ಜಿಲ್ಲೆಗಳಲ್ಲಿ ತಾವು ಪ್ರವಾಸ ಮಾಡಿದ್ದು, ಪರಿಸ್ಥಿತಿ ಅವಲೋಕನ ನಡೆಸಿದ್ದೇನೆ ಎಂದು ಹೇಳಿದರು.

    ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ ರೂ. 1033.60 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಬೆಳೆ ಹಾನಿ ಸಂಭವಿಸಿದ 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.1033.60 ಕೋಟಿ ಹೆಚ್ಚುವರಿ ಪರಿಹಾರ ಒದಗಿಸುವ ಕಾರ್ಯ ಆರಂಭವಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾವು ರೈತರ ಪರವಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇನ್‌ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದೆ. ಗರಿಷ್ಟ 2 ಹೆಕ್ಟೇರಿಗೆ ಸೀಮಿತವಾಗಿ, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ. 8500 ರಿಂದ ರೂ. 17 ಸಾವಿರ, ನೀರಾವರಿ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ.17 ಸಾವಿರದಿಂದ ರೂ.25,500 ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ.22,500ರಿಂದ ರೂ. 31 ಸಾವಿರಕ್ಕೆ ಹೆಚ್ಚಿಸಲಾಗಿದೆ” ಎಂದರು.

    ರೈತರಿಗೆ ಪರಿಹಾರ: ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ 14.24 ಲಕ್ಷ ರೈತರಿಗೆ ಇನ್ಪುಟ್ ಸಬ್ಸಿಡಿಯಾಗಿ ಈಗಾಗಲೇ ರೂ. 1218.03 ಕೋಟಿ ವಿತರಿಸಲಾಗಿದೆ. ಇದರ ಜೊತೆಗೆ ರಾಜ್ಯ ನಿಧಿಯಿಂದ ರೂ. 1033.60 ಕೋಟಿಯನ್ನು ಟಾಪ್ ಅಪ್ ರೂಪದಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಪರಿಹಾರ ಪಾವತಿ ಪ್ರಕ್ರಿಯೆಯಲ್ಲಿರುವ ಪಾವತಿಗಳನ್ನು ಒಳಗೊಂಡಂತೆ ರೂ.2251.63 ಕೋಟಿ ಅನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ.

    ಮುಂಗಾರು ಅವಧಿಯಲ್ಲಿ ದಾಖಲೆಯ 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಜೂನ್ ನಿಂದ ಸೆಪ್ಟಂಬರ್ ಅವಧಿಯಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ 14.58 ಲಕ್ಷ ಹೆಕ್ಟೇರ್ ಗಿಂತ ಹೆಚ್ಚಿನ ಪ್ರದೇಶದ ಬೆಳೆ ಹಾನಿ ಉಂಟಾಗಿದ್ದು, ಇದರಿಂದ ಅಂದಾಜು ರೂ.10,748 ಕೋಟಿ ಬೆಳೆ ಹಾನಿ ಅಂದಾಜಿಸಲಾಗಿದೆ.

    ಮುಖ್ಯವಾಗಿ ತೊಗರಿ ಬೇಳೆ 5.36 ಲಕ್ಷ ಹೆಕ್ಟೇರ್, ಹೆಸರು ಕಾಳು 2.63 ಲಕ್ಷ ಹೆಕ್ಟೇರ್, ಹತ್ತಿ 2.68 ಲಕ್ಷ ಹೆಕ್ಟೇರ್ ಮತ್ತು ಮೆಕ್ಕೆಜೋಳ 1.21 ಲಕ್ಷ ಹೆಕ್ಟೇರ್ ಹಾನಿ ಉಂಟಾಗಿದೆ. 9 ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಉಂಟಾಗಿದೆ. ಮುಖ್ಯವಾಗಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆಗಳು ಕೊಯ್ಲಿನ ಹಂತಕ್ಕೆ ಬಂದ ಸಂದರ್ಭದಲ್ಲಿ ಭಾರೀ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ.

    ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. ಬೆಳೆ ಹಾನಿಯನ್ನು ನಿಖರವಾಗಿ ಖಚಿತಪಡಿಸಲು ಜಂಟಿ ಸಮೀಕ್ಷೆ ನಡೆಸಿ ಹಾನಿಯನ್ನು ಅಂದಾಜಿಸಲಾಗಿದೆ. ಎಲ್ಲಾ ದತ್ತಾಂಶಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಭೂಮಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಯೋಜಿಸಲಾಗಿದೆ.

    ಬೆಳೆ ನಷ್ಟದ ಗ್ರಾಮವಾರು ಪಟ್ಟಿಯನ್ನು ಗ್ರಾಮ ಚಾವಡಿಗಳಲ್ಲಿ ಹಾಗೂ ಆನ್‌ಲೈನ್ ನಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಬಳಿಕ ನಷ್ಟ ಅನುಭವಿಸಿದ ರೈತರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಇನ್‌ಪುಟ್ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.

    ಪ್ರಧಾನಮಂತ್ರಿಯವರನ್ನು ನವೆಂಬರ್ 17ರಂದು ಭೇಟಿ ಮಾಡಿ, ಬೆಳೆ ಹಾನಿ ಇನ್‌ಪುಟ್ ಸಬ್ಸಿಡಿಗೆ ಪ್ರತಿಕ್ರಿಯೆ ಹಾಗೂ ಪರಿಹಾರ ಅಡಿಯಲ್ಲಿ ರೂ. 614.90 ಕೋಟಿ ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಸರಿಪಡಿಸಲು PDNA (Recovery & Reconstruction) ಅಡಿಯಲ್ಲಿ ರೂ. 1,521.67 ಕೋಟಿ ಪರಿಹಾರ ಒದಗಿಸಲು ಮನವಿ ಸಲ್ಲಿಸಲಾಗಿದೆ. ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರ ಅಂತರ ಸಚಿವಾಲಯದ ಕೇಂದ್ರ ತಂಡವನ್ನು ರಚಿಸಿದ್ದು, ಈ ತಂಡ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search