ಲಕ್ನೋ: ಉತ್ತರ ಪ್ರದೇಶದ ಬಾಗ್‍ಪತ್‍ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಕುಸಿದು ಬಿದ್ದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ನಡೆದ ಜೈನ ನಿರ್ವಾಣ ಉತ್ಸವದಲ್ಲಿ ವೇದಿಕೆ ಕುಸಿದು 5 ಮಂದಿ ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಡ್ಡೂ ಸಮಾರಂಭದ ವೇಳೆ ಬಿದಿರು ಮತ್ತು ಮರದಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ವೇದಿಕೆ ಕುಸಿದು ಬಿದ್ದ ಪರಿಣಾಮ ಈ ಘಟನೆ ನಡೆದಿದೆ. ನೂರಾರು ಭಕ್ತರು ಜೈನ ಸನ್ಯಾಸಿಗಳ ಸಮ್ಮುಖದಲ್ಲಿ ಭಗವಾನ್ ಆದಿನಾಥನಿಗೆ ಲಡ್ಡೂಗಳನ್ನು ಅರ್ಪಿಸಲು ಸ್ಥಳದಲ್ಲಿ ಜಮಾಯಿಸಿದ್ದರು.
ಸುಮಾರು 30 ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಕನಿಷ್ಠ 40 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಾಗ್‍ಪತ್‍ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಸ್ಮಿತಾ ಲಾಲ್ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಹೆಚ್ಚಿನ ಪೊಲೀಸ್ ಬಂದೋಬಸ್ತ್‍ನೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


