ಚಾಮರಾಜನಗರ: ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪನ್ಮೂಲದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ. ಎಸ್ಸಿ, ಎಸ್ಟಿ ಹಣ 25 ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಇದರಿಂದ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿಡದೇ ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ಬಳಸಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮನೆ ಹೇಗೆ ನಿರ್ಮಿಸಿಕೊಡ್ತೀರಿ? ಮಕ್ಕಳಿಗೆ ಸ್ಕಾಲರ್ ಶಿಪ್ ಹೇಗೆ ಅನುಷ್ಠಾನ ಮಾಡ್ತೀರಿ? ಸಮುದಾಯ ಭವನ, ರಸ್ತೆ ಹೇಗೆ ಮಾಡ್ತೀರಿ? ಎಸ್ಸಿ, ಎಸ್ಟಿ, ಟಿಎಸ್ಪಿ ಅನುದಾನ ಶಾಸನಬದ್ಧ ಹಕ್ಕು. ಇದಕ್ಕಾಗಿ ನಾವು ಹೋರಾಟ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಇನ್ನು ಮುಂದಿನ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ ಟಿಎಸ್‌ಪಿಗೆ ಅನುದಾನ ಮೀಸಲಿಡಬೇಕು. ಈಗ ಆಗಿರುವ ಅನ್ಯಾಯ ಸರಿಪಡಿಸಬೇಕು. ನಮ್ಮ ಪಾಲು ನಮಗೆ ಸಿಗಬೇಕು ಎಂದು ಆಗ್ರಹಿಸಿದರು.
ಇನ್ನು ಮಹಾರಾಷ್ಟ್ರದ ವಿದ್ಯಾಮಾನ ಕರ್ನಾಟಕದಲ್ಲಿ ಘಟಿಸಬಹುದು. ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತದೆ. ಯಾವ ರೀತಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಫಿನಾಮಿನ ಆಯ್ತೋ ಅದೇ ರೀತಿ ಕರ್ನಾಟಕದಲ್ಲೂ ಆಗಬಹುದು. ವೀರೇಂದ್ರ ಪಾಟೀಲ್, ದೇವರಾಜ ಅರಸು ಅವರನ್ನು ಯಾವ ರೀತಿ ಇಳಿಸಲಾಯಿತು ಎಂಬುದನ್ನು ನೋಡಿದ್ದೇವೆ. ಆದ್ದರಿಂದ ಈ ಸರ್ಕಾರ ಇರುತ್ತೋ ಬಿಡುತ್ತೋ ನಮಗೆ ಗೊತ್ತಿಲ್ಲ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


