ಬೆಂಗಳೂರು: ಎಸ್ಸಿ-ಎಸ್ಟಿ, ಎಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಯ ಅನುದಾನದ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪರಿಶಿಷ್ಟರ ನಿಧಿಗೆ ಮತ್ತೆ ಕಾಂಗ್ರೆಸ್ ಕನ್ನ ಎಂದು ಪೋಸ್ಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೋಷಿತ ಸಮುದಾಯಗಳನ್ನು ನಿರಂತರ ವಂಚಿಸಿ ಅಧಿಕಾರ ಕಬಳಿಸುತ್ತಾ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಬಾರಿಯೂ ತನ್ನ ಆಡಳಿತದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ನಿಧಿಯಲ್ಲಿ ಈ ವರ್ಷದ (2025-26) ಒದಗಿಸಿದ್ದ 11,896.84 ಕೋಟಿ ರೂ.ಗಳನ್ನು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಂಚಿಕೆ ಮಾಡುವ ಮೂಲಕ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲು ಮುಂದಾಗಿದೆ, ಇದು ಸಾಮಾಜಿಕ ನ್ಯಾಯವ್ಯವಸ್ಥೆಯ ಉದ್ದೇಶದ ಅಸ್ತಿತ್ವವನ್ನೇ ಅಲುಗಾಡಿಸಲು ಹೊರಟ ದಲಿತ ದ್ರೋಹಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತೆತ್ತಿದರೆ ತಾವು ಅಹಿಂದ ನಾಯಕರು, ದಲಿತರ ಉದ್ಧಾರಕರು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ಉದ್ಧಾರಕ್ಕೋಸ್ಕರ ಮೀಸಲಿರುವ ಈ ವರ್ಷದ ಹಣವನ್ನೂ ಸಹ ಗ್ಯಾರಂಟಿಗೆ ವರ್ಗಾವಣೆ ಮಾಡಿ ದಲಿತರಿಗೆ ಮತ್ತೆ ಅನ್ಯಾಯ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ನಡೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಸದ್ಯ ಕಳೆದ ವರ್ಷದ ಅನುದಾನವನ್ನೆಲ್ಲ ಗ್ಯಾರಂಟಿಗಳಿಗೆ ಬಳಸಿ, ಎಸ್ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಹೊಡೆದಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ದಲಿತರ ಶ್ರೇಯೋಭಿವೃದ್ಧಿಗೆ ಇದ್ದ ಹಣವನ್ನೆಲ್ಲ ಗ್ಯಾರಂಟಿಗಳಿಗೆ ಬಳಸಿ ರಾಜ್ಯದ ಪರಿಶಿಷ್ಟ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ಇತಿಶ್ರೀ ಹಾಡಲು ಹೊರಟಿರುವ ಕ್ರಮವನ್ನು ರಾಜ್ಯ ಬಿಜೆಪಿ ಸಹಿಸುವ ಮಾತೇ ಇಲ್ಲ, ಈ ನಿರ್ಧಾರದಿಂದ ರಾಜ್ಯ ಸರ್ಕಾರ ಈ ಕೂಡಲೇ ಹಿಂದೆ ಸರಿಯದಿದ್ದರೆ ಪರಿಷ್ಠರ ಪರ ದನಿ ಎತ್ತಿ ಸದನದ ಒಳಗೆ ಹೊರಗೆ ಹೋರಾಟ ನಡೆಸಲಿದೆ ಎಂದು ವಿಜಯೇಂದ್ರ ಗುಡುಗಿದ್ದಾರೆ.
BREAKING: ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ್ದ ದರ್ಶನ್ ಅಭಿಮಾನಿಗಳಿಗೆ ಸಂಕಟ; ಕಮಿಷನರ್‌ಗೆ ದೂರು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


