ಚಂಡೀಗಢ: ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಇಂದು ( ಮೇ 29 ) ನಡೆದ 18ನೇ ಐಪಿಎಲ್ ಆವೃತ್ತಿಯ ಒಂದನೇ ಕ್ವಾಲಿಫಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಆರ್‌ಸಿಬಿ ಬೌಲಿಂಗ್ ದಾಳಿಗೆ ಮಕಾಡೆ ಮಲಗಿ 14.1 ಓವರ್‌ಗಳಲ್ಲಿ 101 ರನ್‌ಗೆ ಆಲ್‌ಔಟ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 102 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಕಲೆಹಾಕಿದೆ.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ಕೆಟ್ಟ ಆರಂಭ ಪಡೆದ ಪಂಜಾಬ್ ಕಿಂಗ್ಸ್ ಪವರ್‌ಪ್ಲೇನಲ್ಲೇ ತನ್ನ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಪ್ರಿಯನ್ಶ್ ಆರ್ಯ 7 (5) ರನ್, ಪ್ರಭ್‌ಸಿಮ್ರನ್ ಸಿಂಗ್ 18 (10) ರನ್, ಜೋಶ್ ಇಂಗ್ಲಿಸ್ 4 (7) ಹಾಗೂ ನಾಯಕ ಶ್ರೇಯಸ್ ಐಯ್ಯರ್ 2 (3) ರನ್ ಗಳಿಸಿ ಔಟ್ ಆದರು. ಈ ಮೂಲಕ 6 ಓವರ್‌ಗಳಲ್ಲಿ 48 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ನೇಹಲ್ ವಧೇರಾ 8 (10), ಶಶಾಂಕ್ ಸಿಂಗ್ 3 (5), ಮುಶೀರ್ ಖಾನ್ ಡಕ್‌ಔಟ್, ಹರ್‌ಪ್ರೀತ್ ಬ್ರಾರ್ 4 (11), ಮಾರ್ಕಸ್ ಸ್ಟಾಯ್ನಿಸ್ 26 (17), ಅಜ್ಮತುಲ್ಲಾ ಓಮರ್ಝೈ 18 (12) ಹಾಗೂ ಕೈಲ್ ಜೆಮಿಸನ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜೋಶ್ ಹೇಜಲ್‌ವುಡ್ ಹಾಗೂ ಸುಯಶ್ ಶರ್ಮಾ ತಲಾ 3 ವಿಕೆಟ್, ಯಶ್ ದಯಾಳ್ 2 ವಿಕೆಟ್, ಭುವನೇಶ್ವರ್ ಕುಮಾರ್ ಹಾಗೂ ರೊಮಾರಿಯಾ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ಆರ್‌ಸಿಬಿ ಪರ ಆರಂಭಿಕರಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಕೊಹ್ಲಿ 12 (12) ರನ್ ಗಳಿಸಿದರೆ, ಫಿಲ್ ಸಾಲ್ಟ್ 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 56 ರನ್ ಚಚ್ಚಿದರು. ಮಯಾಂಕ್ ಅಗರ್ವಾಲ್ 19 (13) ರನ್ ಹಾಗೂ ರಜತ್ ಪಟಿದಾರ್ ಅಜೇಯ 15 (8) ರನ್ ಗಳಿಸಿದರು.
ಪಂಜಾಬ್ ಕಿಂಗ್ಸ್ ಕೈಲ್ ಜೆಮಿಸನ್ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


