ಬೆಂಗಳೂರು: ಮೀಸಲಾತಿ ವಿರೋಧಿ ಹೋರಾಟದಲ್ಲಿ ಸದಾ ಕಾಲ ಮುಂಚೂಣಿಯಲ್ಲಿರುವ ಬಿಜೆಪಿ, ರಾಜಕೀಯ ಕಾರಣಕ್ಕಾಗಿ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮೀಸಲಾತಿಗೆ ಬಿಜೆಪಿ ಬಗೆದಿರುವ ದ್ರೋಹ ಹಾಗೂ ಹಿಂದುಳಿದವರಿಗೆ ಮಾಡಿರುವ ಅನ್ಯಾಯ ಇತಿಹಾಸದ ಮೀಸಲಾತಿ ಚರ್ಚೆಯ ಪ್ರತಿ ಪುಟಗಳಲ್ಲೂ, ಪ್ರತಿ ಪದಗಳಲ್ಲೂ ಅಚ್ಚಳಿಯದೇ ಉಳಿದಿರುವ ಸತ್ಯ ಎಂದಿದ್ದಾರೆ.
ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ತಮ್ಮ ಆತ್ಮಸಾಕ್ಷಿಗೆ ವಿರುದ್ಧ ಮಾತಾಡಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದಾರೆ.
ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಪಕ್ಷ ಅಚಲವಾದ ನಿಲುವು ಹೊಂದಿದೆ. ಆದರೆ ಮೀಸಲಾತಿಯ ಪರಮ ವಿರೋಧಿ ನಿಲುವು ಹೊಂದಿರುವ ಬಿಜೆಪಿ ಪಕ್ಷ ಇತಿಹಾಸ ತಿರುಚಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಮಂಡಲ್ ಆಯೋಗದ ಶಿಫಾರಸ್ಸು ಜಾರಿಯಾಗಬಾರದೆಂದು ಪ್ರಬಲವಾಗಿ ವಿರೋಧ ಮಾಡಿದ್ದೇ ವಿ.ಪಿ.ಸಿಂಗ್ ಸರ್ಕಾರದ ಭಾಗವೇ ಆಗಿದ್ದ ಬಿಜೆಪಿ ಪಕ್ಷ. ಮಂಡಲ್ ಆಯೋಗದ ವಿರುದ್ಧ ಕಮಂಡಲ ಹೋರಾಟ ಶುರು ಮಾಡಿದನ್ನು ಬಿಜೆಪಿ ಮರೆಯಿತೇ? ಮಂಡಲ್ ವರದಿ ತಿರಸ್ಕರಿಸಬೇಕೆಂದು ದೇಶವ್ಯಾಪಿ ಚಳುವಳಿ ನಡೆಸಿ, ಮೈಗೆ ಬೆಂಕಿ ಹಚ್ಚಿಕೊಂಡವರು ಯಾರು ಎಂಬುದನ್ನ ಬಿಜೆಪಿ ಮರೆಮಾಚುತ್ತಿದ್ದೆಯೇ? ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಮೀಸಲಾತಿಯ ಪರ ಮಾತಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರದ ಸಚಿವರು ಇತಿಹಾಸಕ್ಕೆ ಅಪಚಾರ ನಡೆಸಿ, ಜನರನ್ನು ಮೂರ್ಖರನ್ನಾಗಿಸಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಡಿಸೆಂಬರ್ ಬಳಿಕ ವಿಧಾನಸಭೆ ಚುನಾವಣೆ; 150 ಸೀಟ್‌ಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ: ಗೋವಿಂದ ಕಾರಜೋಳ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


