ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಕಾಮನ್ ಅಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇರುತ್ತವೆ. ಆದರೆ ಕ್ಯಾಮೆರಾ ಮುಂದೆ ಬಂದು ಆಪಾದನೆಗಳನ್ನು ಮಾಡುತ್ತಾ ಕಿಡಿಕಾರುವ ಮಟ್ಟದ ವಿವಾದಗಳು ಕಡಿಮೆ ಎಂದೇ ಹೇಳಬಹುದು. ಅಂತಹದ್ದೇ ವಿವಾದವೊಂದು ಸದ್ಯ ಹುಟ್ಟಿಕೊಂಡಿದೆ.
ಹೌದು, ಹಾಡುಗಾರ ಸಂಜಿತ್ ಹೆಗ್ಡೆ ಚಿತ್ರವೊಂದರ ಹಾಡನ್ನು ಹಾಡುವುದಕ್ಕೆ ಎರಡೂವರೆ ಲಕ್ಷ ಹಣ ಪಡೆದುಕೊಳ್ಳುತ್ತಾರೆ ಎಂಬುದಾಗಿ ಆರೋಪ ಮಾಡಿ ಕೆಲ ದಿನಗಳ ಹಿಂದೆ ವಿಡಿಯೊ ಮೂಲಕ ಆಕ್ರೋಶ ಹೊರಹಾಕಿದ್ದ ನಿರ್ಮಾಪಕ ಕೆ. ಮಂಜು ಇದೀಗ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಕಳೆದ ಬಾರಿ ಬಾಂಬೆ ಸಿಂಗರ್‌ಗಳು ಬಾಂಬೆಯಲ್ಲಿ ಐವತ್ತು ಸಾವಿರದ ಮೇಲೆ ಕೇಳಲ್ಲ, ಕೇಳಿದ್ರೆ ಅಲ್ಲಿಂದ ಓಡಿಸ್ತಾರೆ ಎಂಬ ಹೇಳಿಕೆ ನೀಡಿ ಕನ್ನಡ ಹಾಡು ಹಾಡಲು ಎರಡೂವರೆ ಲಕ್ಷ ಕೇಳುತ್ತಿರುವ ಸಂಜಿತ್ ಹೆಗ್ಡೆಯನ್ನು ಓಡಿಸಬೇಕು ಎಂಬರ್ಥದಲ್ಲಿ ಪರೋಕ್ಷವಾಗಿ ಮಾತನಾಡಿದ್ದ ಕೆ. ಮಂಜು ಈ ಬಾರಿ ಹೆಚ್ಚು ಹಣ ಕೇಳುವ ಕಲಾವಿದರನ್ನೆಲ್ಲಾ ಜುಟ್ಟು ಎಂದಿದ್ದಾರೆ.
ʼಡೈಲಿ ಮಾಧ್ಯಮʼ ಎಂಬ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಸಂಜಿತ್ ಹೆಗ್ಡೆ ಅಭಿಮಾನಿಯೊಬ್ಬ ಕೆ. ಮಂಜು ಕ್ಷಮೆ ಕೇಳಬೇಕು ಎಂದು ಹೇಳಿದ್ದರ ವಿರುದ್ಧ ಗರಂ ಆಗಿ ನೇರವಾಗಿ ಬಂದು ಚರ್ಚಿಸುವಂತೆ ಆಹ್ವಾನಿಸಿದರು.
ಅಲ್ಲದೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಕಲಾವಿದರು ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡದೇ ಕನ್ನಡ ಚಿತ್ರರಂಗ ಬೆಳೆಯಬೇಕು ಎಂಬ ಕಾರಣಕ್ಕೆ ಕಡಿಮೆ ಹಣ ತೆಗೆದುಕೊಳ್ಳುತ್ತಾರೆ ಎನ್ನುತ್ತಾ ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್ ಹಾಗೂ ವಾಸುಕಿ ವೈಭವ್ ಅವರನ್ನು ಉದಾಹರಣೆಯನ್ನಾಗಿ ನೀಡಿದ ಕೆ. ಮಂಜು ಕನ್ನಡ ಚಿತ್ರರಂಗಕ್ಕಾಗಿ ಕಡಿಮೆ ದುಡ್ಡಿಗೆ ದುಡಿಯುವವರನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ. ಹಾಗೆಯೇ ದುನಿಯಾ ವಿಜಯ್ ಸ್ಟೈಲಲ್ಲಿ ಹೇಳೋದಾದ್ರೆ ಎನ್ನುತ್ತಾ ಹೆಚ್ಚು ಹಣ ಕೇಳುವ ಜುಟ್ಟುಗಳನ್ನು ಕಿತ್ತು ಬಿಸಾಕಬೇಕು ಎಂದೂ ಸಹ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


