ಪ್ರಸ್ತುತ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ 15 ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ರಾಜಕೀಯ ಸ್ವರೂಪವನ್ನೂ ಸಹ ಪಡೆದುಕೊಂಡಿದ್ದು, ಕಾಂಗ್ರೆಸ್ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಯೋಗಿ ಆದಿತ್ಯನಾಥ್ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಇನ್ನು ನರೇಂದ್ರ ಮೋದಿ ಅಂಡ್ ಟೀಮ್ ಘಟನೆಯ ಕುರಿತು ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದೆ. ಈ ಮೂಲಕ ಈ ಬಾರಿಯ ಕುಂಭಮೇಳವೂ ಇತಿಹಾಸದಲ್ಲಿ ಕರಾಳತೆಯನ್ನು ನೆನಪಿಸುವಂತಾಗಿದೆ.
ಹೀಗೆ ಕಾಂಗ್ರೆಸ್ ಈ ಘಟನೆಗೆ ಬಿಜೆಪಿಯೇ ಹೊಣೆ ಎನ್ನುತ್ತಿದ್ದರೆ, ಬಿಜೆಪಿ ನಾಯಕರು ಹಾಗೂ ಮಾತ್ರ ಇಂತಹ ಘಟನೆ ನಡೆದರೂ ಬಿಜೆಪಿ ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದೆ ಎಂದು ಮೋದಿ ಸರ್ಕಾರದ ಕೆಲಸವನ್ನು ಹೊಗಳುತ್ತಿದ್ದಾರೆ. ಹೀಗೆ ಕಾಲ್ತುಳಿತದ ರಾಜಕೀಯ ಚರ್ಚೆ ಜೋರಾಗಿರುವಾಗಲೇ ನರೇಂದ್ರ ಮೋದಿ 1954ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ಸಂಭವಿಸಿದ್ದ ಕಾಲ್ತುಳಿತದ ಬಗ್ಗೆ ಮಾತನಾಡಿ ಪ್ರಧಾನಮಂತ್ರಿ ನೆಹರು ವಿರುದ್ಧ ಕಿಡಿಕಾರಿದ್ದ ವಿಡಿಯೊ ವೈರಲ್ ಆಗಿದೆ.
ಹೌದು, “ಪ್ರಧಾನಮಂತ್ರಿ ನೆಹರು ಅವರು ಕುಂಭಮೇಳಕ್ಕೆ ಆಗಮಿಸಿದ್ದರು. ಈಗ ನಾನು ಹೇಳಲು ಹೊರಟಿರುವ ಸುದ್ದಿಯನ್ನು ಐದಾರು ದಶಕಗಳಿಂದ ಮುಚ್ಚಿಡಲಾಗಿದೆ. ಆಗ ಮೇಳಗಳು ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರಲಿಲ್ಲ. ಆ ಸಮಯದಲ್ಲಿ ನೆಹರು ಬಂದಿದ್ದರು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಇತ್ತು. ದೆಹಲಿಯಲ್ಲಿ ಕಾಂಗ್ರೆಸ್ ಇತ್ತು. ಅಷ್ಟೇ ಯಾಕೆ ಇಡೀ ದೇಶದ ತುಂಬಾ ಕಾಂಗ್ರೆಸ್ ಇತ್ತು. ಆಗ ಇತರೆ ಪಾರ್ಟಿಗಳಾಗಲಿ ಇರಲಿಲ್ಲ. ಉತ್ತರಪ್ರದೇಶದ ಜನರೇ ನಾನು ಹೇಳುವ ಈ ಸುದ್ದಿಯನ್ನು ಕೇಳಿ ನೀವು ಸಹ ಶಾಕ್ ಆಗ್ತೀರಾ. ಆಗ ನೆಹರು ಬಂದಿದ್ದರು. ಆದರೆ ಅವ್ಯವಸ್ಥೆ ಕಾರಣ ಕುಂಭಮೇಳದಲ್ಲಿ ತಳ್ಳಾಟ ನೂಕಾಟ ಏರ್ಪಟ್ಟಿತ್ತು. ಸಾವಿರ ಜನರು ಮೃತಪಟ್ಟರು. ಅವರೆಲ್ಲಾ ತುಳಿಯಲ್ಪಟ್ಟು ಸಾವನ್ನಪ್ಪಿದರು. ಆದರೆ ಸರ್ಕಾರದ ಹೆಸರನ್ನು ಉಳಿಸುವ ಸಲುವಾಗಿ ನೆಹರು ಮೇಲೆ ಯಾವುದೇ ಆಪಾದನೆ ಬರಲೇ ಇಲ್ಲ. ಆಗಿನ ಮಾಧ್ಯಮಗಳು ಈ ಸತ್ಯಾಂಶವನ್ನು ಬಿಚ್ಚಿಡುವ ಯತ್ನ ಮಾಡಲೇ ಇಲ್ಲ. ನೆಹರು ಹೆಸರು ಎಲ್ಲಿಯೂ ಬರಲೇ ಇಲ್ಲ” ಎಂದು ಹೇಳಿಕೆ ನೀಡುವ ಮೂಲಕ ಕಿಡಿಕಾರಿದ್ದರು.
ಹೀಗೆ ಮೋದಿ ಈ ಹಿಂದೆ ನೀಡಿದ್ದ ಈ ಹೇಳಿಕೆ ಈಗ ವೈರಲ್ ಆಗಿದ್ದು, ಈ ವಿಡಿಯೊ ಹಂಚಿಕೊಂಡಿರುವ ಕಾಂಗ್ರೆಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಈಗ ದೊಡ್ಡದಾಗಿ ಕುಂಭಮೇಳ ನಡೆಸುವಷ್ಟು ಪಕ್ಕಾ ತಯಾರಿ ಮಾಡಿಕೊಂಡಿದ್ದರೂ ಸಹ ಇಂತಹ ಘಟನೆ ಏಕಾಯಿತು? ಆಗ ಡಿಜಿಟಲ್ ಮೀಡಿಯಾ ಇರಲಿಲ್ಲ, ಈಗ ಎಷ್ಟೆಲ್ಲಾ ತಂತ್ರಜ್ಞಾನವಿದ್ದರೂ ಈ ತಪ್ಪು ಯಾಕಾಯಿತು ಎಂದು ಪ್ರಶ್ನೆ ಹಾಕಿ ಮೋದಿಯನ್ನು ಟ್ರೋಲ್ ಮಾಡಿದ್ದಾರೆ.
ಇನ್ನು ಮೋದಿ ಆಪಾದನೆ ಪ್ರಕಾರ ಈ ಬಾರಿ ಮಾಧ್ಯಮದವರು ಘಟನೆ ಹಿಂದಿನ ಸತ್ಯ ಬಿಚ್ಚಿಡುವುದಕ್ಕೆ ಹಿಂದೇಟು ಹಾಕುತ್ತಿಲ್ಲ. ಹೆಚ್ಚಿನ ಜನರಿದ್ದ ಕಾರಣ ಕಾಲ್ತುಳಿತ ಆಗಿದೆ ಎಂದು ಬಿಜೆಪಿ ಹಾಗೂ ಕೆಲ ಮಾಧ್ಯಮದವರು ಸುದ್ದಿ ಹಬ್ಬಿಸುತ್ತಿದ್ದರೆ, ಇನ್ನೂ ಕೆಲ ಮಾಧ್ಯಮಗಳು ವಿವಿಐಪಿ, ವಿಐಪಿಗಳಿಗೆ ದಾರಿ ಮಾಡಿಕೊಡುವ ಸಲುವಾಗಿ ಜನಸಾಮಾನ್ಯರನ್ನು ತಡೆಹಿಡಿದದ್ದೇ ಕಾಲ್ತುಳಿತಕ್ಕೆ ಕಾರಣ ಎಂದು ಸುದ್ದಿ ಮಾಡುವ ಧೈರ್ಯ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


