ಸಿನಿಮಾ ರಂಗದಲ್ಲಿ ಕಾಪಿ ಕಿತ್ತಾಟ ಹೊಸದೇನಲ್ಲ. ಹಾಡುಗಳು, ಟ್ಯೂನ್, ಹಿನ್ನೆಲೆ ಸಂಗೀತ, ಸೀನ್, ನೃತ್ಯ ಹಾಗೂ ಡೈಲಾಗ್ ಇವುಗಳನ್ನು ಬೇರೊಂದು ಚಿತ್ರರಂಗದಿಂದ ಕಾಪಿ ಮಾಡಿರುವ ಸಾಕಷ್ಟು ಉದಾಹರಣೆಗಳನ್ನು ಕಂಡಿದ್ದೇವೆ.
ಕೆಲವರು ಕದ್ದ ಕೂಡಲೇ ಸಿಕ್ಕಿ ಬಿದ್ದರೆ, ಇನ್ನೂ ಕೆಲವರು ಹಲವು ವರ್ಷಗಳ ಬಳಿಕ ಆರೋಪವನ್ನು ಎದುರಿಸಿದ್ದಾರೆ ಹಾಗೂ ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಬಂದ ಬಳಿಕ ಪ್ರೇಕ್ಷಕರಿಂದಲೇ ತಮ್ಮ ಬಂಡವಾಳ ಬಯಲು ಮಾಡಿಸಿಕೊಂಡಿದ್ದಾರೆ.
ಸದ್ಯ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸುದ್ದಿಗೀಡಾಗಿದ್ದಾರೆ. ಹೌದು, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತೆಲುಗಿನ ʼಹಾಯ್ ನಾನ್ನʼ ಚಿತ್ರ ನನ್ನ ನಿರ್ಮಾಣದ ʼಭೀಮಸೇನ ನಳಮಹಾರಾಜʼ ಸಿನಿಮಾದ ರಿಮೇಕ್ ಎಂದು ದೂರಿದ್ದಾರೆ.
ʼನಮ್ಮ ಒರಿಜಿನಲ್ ಭೀಮಸೇನ ನಳಮಹಾರಾಜ ಚಿತ್ರದ ರಿಮೇಕ್ ಹಕ್ಕನ್ನು ತೆಗೆದುಕೊಳ್ಳದೇ ಹಾಯ್ ನಾನ್ನ ಚಿತ್ರವನ್ನು ರಿಮೇಕ್ ಮಾಡಲಾಗಿದೆ. ಎಂಥ ಚೀಪ್ ಮಾಡಿದ್ರಿ ನಾನಿ?ʼ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಬರೆದುಕೊಂಡಿದ್ದು, ಎರಡೂ ಚಿತ್ರಗಳ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ ಹಾಗೂ ನಾನಿ ಅವರ ಇನ್ಸ್ಟಾಗ್ರಾಮ್ ಖಾತೆಯನ್ನೂ ಸಹ ಉಲ್ಲೇಖಿಸಿದ್ದಾರೆ.
ಸದ್ಯ ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಆರೋಪವಷ್ಟೇ ಆಗಿದ್ದು, ಹಾಯ್ ನಾನ್ನ ಚಿತ್ರತಂಡ ಈ ಕುರಿತು ಏನು ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


