ಪ್ರತಿ ವರ್ಷ ಮೇ 1ರಂದು ವಿಶ್ವದಾದ್ಯಂತ ಕಾರ್ಮಿಕ ದಿನ ಅಥವಾ ʼಮೇ ಡೇʼಯನ್ನು ಆಚರಿಸಲಾಗುತ್ತದೆ. ಈ ದಿನವು ಕಾರ್ಮಿಕರ ಹೋರಾಟ ಮತ್ತು ತ್ಯಾಗಗಳನ್ನು ಸ್ಮರಿಸಲು, ಅವರ ಹಕ್ಕುಗಳನ್ನು ಉತ್ತೇಜಿಸಲು ಮತ್ತು ಶೋಷಣೆಯಿಂದ ರಕ್ಷಿಸಲು ಸಮರ್ಪಿತವಾಗಿದೆ.
ಇನ್ನು ಮೇ 1ರಂದೇ ಏಕೆ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹುಡುಕುತ್ತಾ ಹೋದರೆ ಇತಿಹಾಸವು 19ನೇ ಶತಮಾನದ ಅಮೆರಿಕಕ್ಕೆ ಹಿಂದಿರುಗುತ್ತದೆ. 1886ರ ಮೇ 1 ರಂದು ಅಮೆರಿಕದ ಚಿಕಾಗೋದಲ್ಲಿ ಕಾರ್ಮಿಕರು ಎಂಟು ಗಂಟೆಗಳ ಕೆಲಸದ ದಿನಕ್ಕಾಗಿ ಬೇಡಿಕೆ ಇರಿಸಿ ದೊಡ್ಡ ಪ್ರತಿಭಟನೆಯನ್ನು ಆಯೋಜಿಸಿದ್ದರು. ಆ ಸಮಯದಲ್ಲಿ ಕಾರ್ಮಿಕರು ದಿನಕ್ಕೆ 12 ರಿಂದ 16 ಗಂಟೆಗಳವರೆಗೆ ಕೆಲಸ ಮಾಡಬೇಕಾಗಿತ್ತು ಮತ್ತು ಅವರಿಗೆ ಸರಿಯಾದ ವೇತನ, ಸುರಕ್ಷತೆ ಅಥವಾ ವಿಶ್ರಾಂತಿ ಸಿಗುತ್ತಿರಲಿಲ್ಲ.
ಈ ಪ್ರತಿಭಟನೆಯ ವೇಳೆ ಬಾಂಬ್ ಸ್ಪೋಟಗೊಂಡು ಪೊಲೀಸರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದರು. ಈ ಘಟನೆಯ ನಂತರ 1889ರಲ್ಲಿ ಇಂಟರ್‌ನ್ಯಾಷನಲ್ ಸೋಷಿಯಲಿಸ್ಟ್ ಕಾಂಗ್ರೆಸ್ ಸಭೆಯಲ್ಲಿ ಮೇ 1 ರಂದು ಕಾರ್ಮಿಕ ದಿನವನ್ನು ಅಂತರರಾಷ್ಟ್ರೀಯವಾಗಿ ಆಚರಿಸುವ ನಿರ್ಧಾರ ಕೈಗೊಂಡಿತು. ಇದು ಕಾರ್ಮಿಕರ ಹಕ್ಕುಗಳಾದ ಸರಿಯಾದ ವೇತನ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಸಮಂಜಸವಾದ ಕೆಲಸದ ಸಮಯವನ್ನು ಒತ್ತಾಯಿಸುವ ಸಂಕೇತವಾಯಿತು.
ಭಾರತದಲ್ಲಿ ಮೊದಲ ಕಾರ್ಮಿಕ ದಿನವನ್ನು 1923ರ ಮೇ 1 ರಂದು ಚೆನ್ನೈನಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸಂಘಟಿಸಿತ್ತು. ಭಾರತದ ವಿವಿಧ ರಾಜ್ಯಗಳಲ್ಲಿ ಈ ದಿನವನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಕನ್ನಡದಲ್ಲಿ “ಕಾರ್ಮಿಕರ ದಿನಾಚರಣೆ” ಎಂದು ಕರೆಯುವ ಈ ದಿನವು ಕಾರ್ಮಿಕರ ಮಹತ್ವವನ್ನು ಒತ್ತಿಹೇಳುತ್ತದೆ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಗೌರವಿಸುತ್ತದೆ.
ಇಂದು ಭಾರತ ಸೇರಿದಂತೆ 80ಕ್ಕೂ ಹೆಚ್ಚು ದೇಶಗಳಲ್ಲಿ ಮೇ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕರು ಮೆರವಣಿಗೆ, ಸಭೆಗಳು ಮತ್ತು ಕಾರ್ಯಕ್ರಮಗಳ ಮೂಲಕ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಾರೆ. ಕಾರ್ಮಿಕ ದಿನವು ಎಲ್ಲರಿಗೂ ಕಾರ್ಮಿಕರ ಶ್ರಮದ ಮೌಲ್ಯವನ್ನು ಮನದಟ್ಟು ಮಾಡುವ ಒಂದು ಸಂದರ್ಭವಾಗಿದೆ.
ಶುಭಾಶಯ: ನಂಬಿದವರ ಪೋಷಣೆಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮ ವಹಿಸಿ ದುಡಿದು ಮನೆಯ ಆಧಾರ ಎನಿಸಿಕೊಂಡಿರುವ ಎಲ್ಲ ಓದುಗರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


