ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಅಜರುದ್ದೀನ್ ತೆಲಂಗಾಣ ಸಚಿವ ಸಂಪುಟ ಸೇರಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂಪುಟದಲ್ಲಿ ಅಜರುದ್ದೀನ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮೊಹಮ್ಮದ್ ಅಜರುದ್ದೀನ್‌ಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಜರುದ್ದೀನ್ ಅವರಿಗೆ ಅಭಿನಂದಿಸಿದರು.
ಅಜರುದ್ದೀನ್ ಸಂಪುಟ ಸೇರ್ಪಡೆಯ ಮೂಲಕ ತೆಲಂಗಾಣದ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಮುಸ್ಲಿಂ ಸಮುದಾಯದ ಸಚಿವ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಶಾಸಕರೂ ಅಲ್ಲದ, ವಿಧಾನ ಪರಿಷತ್ ಸದಸ್ಯರೂ ಅಲ್ಲದ ಅಜರುದ್ದೀನ್ ಸಚಿವರಾಗಿರುವುದು ಅಚ್ಚರಿ ಮೂಡಿಸಿದೆ.
ತೆಲಂಗಾಣ ಸಂಪುಟದಲ್ಲಿ 18 ಸಚಿವರು ಕಾರ್ಯ ನಿರ್ವಹಣೆ ಮಾಡಲು ಅವಕಾಶವಿದೆ. ಮೊಹಮ್ಮದ್ ಅಜರುದ್ದೀನ್ ಸೇರ್ಪಡೆ ಬಳಿಕ ಸಿಎಂ ರೇವಂತ್ ರೆಡ್ಡಿ ಸಂಪುಟದ ಸಚಿವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಉಪ ಚುನಾವಣೆಗೆ ಸ್ಪರ್ಧೆ: 2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮೊಹಮ್ಮದ್ ಅಜರುದ್ದೀನ್ ಜ್ಯುಬ್ಲಿ ಹಿಲ್ಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ 64,212 ಮತಗಳನ್ನು ಪಡೆದ ಅವರು ಬಿಆರ್‌ಎಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು.
ಮೊಹಮ್ಮದ್ ಅಜರುದ್ದೀನ್ ಅವರನ್ನು ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಿತ್ತು. ಆದರೆ ಈ ಪ್ರಸ್ತಾವನೆಗೆ ಇನ್ನೂ ರಾಜ್ಯಪಾಲರ ಒಪ್ಪಿಗೆ ನೀಡಿಲ್ಲ. ಆದರೆ ಶಾಸಕರು, ಪರಿಷತ್ ಸದಸ್ಯರೂ ಅಲ್ಲದ ಮೊಹಮ್ಮದ್ ಅಜರುದ್ದೀನ್ ಈಗ ಸಚಿವರಾಗಿದ್ದಾರೆ.
ಬಿಆರ್‌ಎಸ್ ಪಕ್ಷದ ನಾಯಕ, ಜ್ಯುಬ್ಲಿ ಹಿಲ್ಸ್ ಕ್ಷೇತ್ರದ ಶಾಸಕ ಮಾಗಂಟಿ ಗೋಪಿನಾಥ್ (63) 2025ರ ಜೂನ್ 7ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಈ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಮೊಹಮ್ಮದ್ ಅಜರುದ್ದೀನ್ ಅಭ್ಯರ್ಥಿ.
ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಜ್ಯುಬ್ಲಿ ಹಿಲ್ಸ್ ಉಪ ಚುನಾವಣೆ ನಡೆಯುವ ಮೊದಲೇ ಮೊಹಮ್ಮದ್ ಅಜರುದ್ದೀನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಜ್ಯುಬ್ಲಿ ಹಿಲ್ಸ್ ಉಪ ಚುನಾವಣೆಗೆ 211 ಅಭ್ಯರ್ಥಿಗಳು 321 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ಅದರಲ್ಲಿ ನಾಮಪತ್ರ ಸಲ್ಲಿಕೆ ಕೊನೆಯ ದಿನವೇ 117 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಪರಿಶೀಲನೆ ವೇಳೆ ವಿವಿಧ ಕಾರಣಕ್ಕೆ 186 ನಾಮಪತ್ರ ತಿರಸ್ಕಾರವಾಗಿದೆ. ಅಂತಿಮವಾಗಿ ಚುನಾವಣಾ ಕಣದಲ್ಲಿ 81 ಅಭ್ಯರ್ಥಿಗಳಿದ್ದಾರೆ. ಇದರಲ್ಲಿ ಮೊಹಮ್ಮದ್ ಅಜರುದ್ದೀನ್ ಸಹ ಒಬ್ಬರು.
ನವೆಂಬರ್ 11ರಂದು ಉಪ ಚುನಾವಣೆಯ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆದು ಮೊಹಮ್ಮದ್ ಅಜರುದ್ದೀನ್ ಶಾಸಕರಾಗಿ ಆಯ್ಕೆಯಾಗಲಿದ್ದಾರೆಯೇ? ಎಂಬುದು ತಿಳಿಯಲಿದೆ. ಕ್ಷೇತ್ರದಲ್ಲಿ 1.2 ಲಕ್ಷ ಮುಸ್ಲಿಂ ಸಮುದಾಯದ ಮತಗಳಿವೆ. ಆದ್ದರಿಂದ ಮೊಹಮ್ಮದ್ ಅಜರುದ್ದೀನ್ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರವಾಗಿದೆ.
ತೆಲಂಗಾಣದ ವಿರೋಧ ಪಕ್ಷವಾದ ಬಿಆರ್‌ಎಸ್ ಸಿಎಂ ರೇವಂತ್ ರೆಡ್ಡಿ, ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಕಡೆಗಣಿಸಿದೆ ಎಂದು ಆರೋಪ ಮಾಡುತ್ತಿತ್ತು. ಈಗ ಮೊಹಮ್ಮದ್ ಅಜರುದ್ದೀನ್ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ವಿರೋಧಿಗಳ ಬಾಯಿ ಮುಚ್ಚಿಸಿದೆ.
ಮೊಹಮ್ಮದ್ ಅಜರುದ್ದೀನ್ ಸಚಿವ ಸ್ಥಾನ ಉಳಿಸಿಕೊಳ್ಳಲು 6 ತಿಂಗಳೊಳಗೆ ಶಾಸಕ ಅಥವ ಎಂಎಲ್ಸಿ ಆಗಲೇಬೇಕು. ಜ್ಯುಬ್ಲಿ ಹಿಲ್ಸ್ ಉಪ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದರೆ ಶಾಸಕರಾಗುತ್ತಾರೆ. ಇಲ್ಲವಾದಲ್ಲಿ ರಾಜ್ಯಪಾಲರು ವಿಧಾನ ಪರಿಷತ್ ನಾಮ ನಿರ್ದೇಶನದ ಕಡತಕ್ಕೆ ಸಹಿ ಹಾಕಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


