ಜಾತಿಗಣತಿ ಅಥವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಮುಕ್ತಾಯಗೊಂಡಿದೆ. ಮನೆ ಮನೆ ಸಮೀಕ್ಷೆ ಅಕ್ಟೋಬರ್ 31ಕ್ಕೆ ಅಂತ್ಯಗೊಂಡಿದೆ. ಆದರೆ ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ನವೆಂಬರ್ 10ರ ತನಕ ಆನ್‌ಲೈನ್ ಮೂಲಕ ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ.
ಸಮೀಕ್ಷೆ ಪೂರ್ಣಗೊಂಡಿರುವ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಸರ್ಕಾರದ ಆದೇಶ ಸಂಖ್ಯೆ ಹಿಂವಕ 289 ಬಿಸಿಎ 2025, ದಿನಾಂಕ 13.08.2025ರ ಅನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜನರ (ಹಿಂದುಳಿದ ವರ್ಗಗಳು, ಇತರ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ: 22.09.2025 ರಿಂದ ಪ್ರಾರಂಭಿಸಲಾಗಿದ್ದು, ದಿನಾಂಕ 31.10.2025ರಂದು ಮುಕ್ತಾಯಗೊಂಡಿರುತ್ತದೆ ಎಂದು ಹೇಳಿದೆ.
ಸಮೀಕ್ಷೆಯ ಸಂಕ್ಷಿಪ್ತ ವಿವರ
- Projected Population of Karnataka-2025: 6,85,38,000
- Surveyed Population till 31.10.2025: 6,13,83,908
- Refused Households: 4,22,258
- Vacant/Locked Houses: 34,49,681
ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ https://kscbcselfdeclaration.karnataka.gov.in ಲಿಂಕ್ ಬಳಕೆ ಮಾಡಿಕೊಂಡು ಸ್ವಯಂ ಪಾಲ್ಗೊಳ್ಳುವ ಅವಧಿಯನ್ನು ದಿನಾಂಕ 10.11.2025ರ ವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ಆಯೋಗ ಹೇಳಿದೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದವರು, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಲಭ್ಯವಿಲ್ಲದವರು ಸಹ ಸದರಿ ಅವಕಾಶವನ್ನು ಬಳಸಿಕೊಂಡು ಮಾಹಿತಿಯನ್ನು ದಾಖಲಿಸಬಹುದಾಗಿದೆ. ಸದರಿ ಸಮೀಕ್ಷೆಯಿಂದ ಸರ್ಕಾರದ ನೀತಿಗಳನ್ನು ಹಾಗೂ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವ ಕಾರಣ ಸ್ವಯಂ ದೃಢೀಕರಣದ ಮೂಲಕ ಎಲ್ಲಾ ನಾಗರಿಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಈ ಮೂಲಕ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮೊದಲು ಅಕ್ಟೋಬರ್ 7ಕ್ಕೆ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿತ್ತು. ಆದರೆ ಎರಡು ಬಾರಿ ಸಮೀಕ್ಷೆ ಅವಧಿ ವಿಸ್ತರಣೆ ಮಾಡಿ, ಮನೆ ಮನೆ ಸಮೀಕ್ಷೆಯನ್ನು ಅಕ್ಟೋಬರ್ 31ಕ್ಕೆ ಪೂರ್ಣಗೊಳಿಸಿದೆ.
ಸದ್ಯದ ಮಾಹಿತಿ ಪ್ರಕಾರ ನವೆಂಬರ್ ಅಂತ್ಯಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಖ್ಯಮಂತ್ರಿಗಳಿಗೆ ಸಮೀಕ್ಷೆಯ ವರದಿಯನ್ನು ಸಲ್ಲಿಕೆ ಮಾಡಲಿದೆ. ಬಳಿಕ ಸರ್ಕಾರ ವರದಿಯ ಕುರಿತು ತೀರ್ಮಾನವನ್ನು ಕೈಗೊಳ್ಳಲಿದೆ.
ಸಂಭಾವನೆ ನೀಡಲು ಪತ್ರ: ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಸಮೀಕ್ಷೆಯಲ್ಲಿ ತೊಡಗಿದ ಸಿಬ್ಬಂದಿಗೆ ಸಂಭಾವನೆ ನೀಡುವ ಕುರಿತು ಆಯೋಗಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪತ್ರವನ್ನು ಬರೆದಿದೆ. ಈ ಪ್ರತ್ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ನಿರ್ವಹಿಸಿದ ಸಮೀಕ್ಷಾದಾರರಿಗೆ ನೀಡಲಾಗುವ ಸಂಭಾವನೆ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಕುಟುಂಬ ಗಣತಿ ಕಾರ್ಯವು ದಿನಾಂಕ 22-09-2025 ರಿಂದ ಆರಂಭವಾಗಿ 31-10-2025ರವರೆಗೂ ಮುಂದುವರೆದಿದ್ದು, ಗಣತಿ ಕಾರ್ಯದಲ್ಲಿ ನಿಯೋಜನೆಗೊಂಡಿದ್ದ ರಾಜ್ಯದ ಅಧಿಕಾರಿ/ ನೌಕರರು ಅನೇಕ ಸಮಸ್ಯೆ/ ಸವಾಲುಗಳು ಹಾಗೂ ಕಷ್ಟಗಳ ಮಧ್ಯೆಯೂ ಗಣತಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ ಎಂದು ಸಂಘ ಹೇಳಿದೆ.
ಆಯೋಗವು ಪ್ರತಿ ಮನೆಯ ಗಣತಿ ಕಾರ್ಯಕ್ಕೆ ರೂ. 100ಗಳ ಸಮೀಕ್ಷಾ ಸಂಭಾವನೆ ನೀಡಲು ತಿಳಿಸಿರುತ್ತದೆ. ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಪ್ರತಿ ನೌಕರರಿಗೆ ಕುಟುಂಬಗಳ ಸಂಖ್ಯೆಯನ್ನು ಹಂಚಿಕೆ ಮಾಡಲಾಗಿರುತ್ತದೆ. ಹಾಗೆಯೇ, ಅಂತಹ ಕುಟುಂಬಗಳ ಗಣತಿ ಕಾರ್ಯದ ಜೊತೆಗೆ ಮಾಹಿತಿ ನಿರಾಕರಿಸಿದ ಕುಟುಂಬಗಳು, ಖಾಲಿ ಮನೆಗಳು ಹಾಗೂ ಇತರೆ UHID ಸಂಖ್ಯೆಗಳ ಗಣತಿ ಕಾರ್ಯವನ್ನೂ ಸಹ ಮಾಡಿರುತ್ತಾರೆ.
ಆದ್ದರಿಂದ, ಸಮೀಕ್ಷಾ ಕುಟುಂಬಗಳ ಜೊತೆಗೆ, ಮಾಹಿತಿ ನಿರಾಕರಿಸಿದ ಕುಟುಂಬಗಳು, ಖಾಲಿ ಮನೆಗಳು ಹಾಗೂ ಇತರೆ UHID ಗಣತಿ ಸಂಖ್ಯೆಗಳನ್ನು ಸಹ ಒಟ್ಟು ಸಮೀಕ್ಷೆ ಸಂಖ್ಯೆ ಎಂದು ಪರಿಗಣಿಸಿ ಗಣತಿದಾರರು ನಿರ್ವಹಿಸಿರುವ ಒಟ್ಟು ಸಂಖ್ಯೆಯಷ್ಟು ಮನೆಗಳ ಸಂಭಾವನೆಯನ್ನು ವಿಳಂಬಕ್ಕೆ ಅವಕಾಶ ನೀಡದೆ ಮಂಜೂರು ಮಾಡುವಂತೆ ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


