ಬೆಂಗಳೂರು ನಗರ ಜಿಲ್ಲೆಯ ಜನರಿಗೆ ಮಹತ್ವದ ಮಾಹಿತಿ ಒಂದಿದೆ. ನಗರದ ಹೃದಯ ಭಾಗದಲ್ಲಿದ್ದ ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರವಾಗಿದೆ. ಇನ್ನು ಮುಂದೆ ಕಚೇರಿ ಕೆಲಸಕ್ಕೆ ಹೋಗುವವರು ಅಂಜನಾಪುರಕ್ಕೆ ಭೇಟಿ ನೀಡಬೇಕಿದೆ.
ಕಾರ್ಯದರ್ಶಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಜಯನಗರ ಬೆಂಗಳೂರು (ದಕ್ಷಿಣ), ಕೆಎ-05 ಕಛೇರಿಯು ಸ್ಥಳಾಂತರವಾಗಿದೆ. ಹೊಸ ಕಚೇರಿ ಸರ್ವೇ ನಂ. 64/1, ಅಂಜನಾಪುರ, ಉತ್ತರಹಳ್ಳಿ, ಹೋಬಳಿಯ, ಜೆ.ಪಿ.ನಗರ, 9ನೇ ಹಂತ, ಬೆಂಗಳೂರು-560108 ಇಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದಲ್ಲಿದೆ.
ಜನರು ಇನ್ನು ಮುಂದೆ ಸಾರಿಗೆ ಇಲಾಖೆಯ ಕೆಎ:05ಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ ಹೊಸ ಕಚೇರಿಗೆ ಭೇಟಿ ನೀಡಬಹುದು ಎಂದು ಬೆಂಗಳೂರು (ದಕ್ಷಿಣ) ಜಯನಗರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಟಿಸಿ ಬಸ್ ಸೇವೆ: ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಸ್ಥಳಾಂತರಗೊಂಡ ಹಿನ್ನಲೆಯಲ್ಲಿ ಜನರು ಹೊಸ ಕಚೇರಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಬಿಎಂಟಿಸಿ ಹಲವು ಬಸ್‌ಗಳ ಸೇವೆಯನ್ನು ವಿಸ್ತರಣೆ ಮಾಡಿದೆ.
ನಗರದಿಂದ ಹಲವು ಬಸ್‌ಗಳು ಕಚೇರಿಗೆ ಸಂಪರ್ಕವನ್ನು ಕಲ್ಪಿಸುತ್ತವೆ. ಅಲ್ಲದೇ ನಮ್ಮ ಮೆಟ್ರೋ ಬಳಕೆ ಮಾಡುವ ಜನರು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ 3ಕಿ.ಮೀ. ದೂರದಲ್ಲಿರುವ ಕಚೇರಿಗೆ ಸುಲಭವಾಗಿ ಸಂಚಾರವನ್ನು ನಡೆಸಬಹುದು.
ಬಸ್ ವೇಳಾಪಟ್ಟಿ: ಅಂಜನಾಪುರ ಆರ್‌ಟಿಒ ಕಚೇರಿಯಿಂದ ಬಿಎಂಟಿಸಿ ಬಸ್ ಹೊರಡುವ ಸಮಯ ಬೆಳಗ್ಗೆ 9.10, 9.35, 10, 10.20, 11, 11.35. ಮಧ್ಯಾಹ್ನ 12.05, 1.05, 2, 3, 3.25, 4.05, 4.30 ಮತ್ತು ಸಂಜೆ 5.10, 6.15ಗಂಟೆ.
ಕೆ.ಆರ್.ಮಾರ್ಕೆಟ್ ಬಸ್ ನಿಲ್ದಾಣದಿಂದ ಆರ್‌ಟಿಒ ಕಚೇರಿಗೆ ಬಸ್ ಹೊರಡುವ ಸಮಯ ಬೆಳಗ್ಗೆ 8.05, 8.30, 9, 10,10.30, 11, 12 ಗಂಟೆ. ಮಧ್ಯಾಹ್ನ 1, 1.30, 2.05, 3.10 ಗಂಟೆ.
ಬನಶಂಕರಿ ಟಿಟಿಎಂಸಿಯಿಂದಲೂ ಹೊಸ ಆರ್‌ಟಿಒ ಕಚೇರಿಗೆ ಬಸ್‌ಗಳಿವೆ. ಬಸ್ ಹೊರಡುವ ಸಮಯ ಬೆಳಗ್ಗೆ 9.25, ಮಧ್ಯಾಹ್ನ 1.45, 2.45 ಗಂಟೆ.
ಆರ್‌ಟಿಒ ಕಚೇರಿ: ಜಯನಗರ ಆರ್‌ಟಿಒ ಕಚೇರಿ ನವೆಂಬರ್ ಬಳಿಕ ಪೂರ್ಣವಾಗಿ ಅಂಜನಾಪುರಕ್ಕೆ ಸ್ಥಳಾಂತರವಾಗಲಿದೆ ಎಂದು ಈ ಹಿಂದೆಯೇ ಪ್ರಕಟಿಸಲಾಗಿತ್ತು. ಬೆಂಗಳೂರು (ದಕ್ಷಿಣ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ 1981ರಲ್ಲಿ ಪ್ರಾರಂಭವಾಗಿದ್ದು, ಇದು 2011ರಿಂದ ಜಯನಗರ 4ನೇ ಬ್ಲಾಕ್ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿತ್ತು.
2025ರ ಆಗಸ್ಟ್‌ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಂಜನಾಪುರದಲ್ಲಿ ಹೊಸ ಕಟ್ಟಡವನ್ನು ಉದ್ಘಾಟಿಸಿದ್ದರು. ಹಂತ ಹಂತವಾಗಿ ಅಲ್ಲಿಗೆ ಸಿಬ್ಬಂದಿಗಳ ಸ್ಥಳಾಂತರ ಕಾರ್ಯ ಪ್ರಾರಂಭವಾಗಿತ್ತು. ನವೆಂಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ಅಂಜನಾಪುರದಲ್ಲಿಯೇ ಕಚೇರಿ ಕಾರ್ಯ ನಿರ್ವಹಣೆ ಮಾಡಲಿದೆ.
ಮೂರು ಅಂತಸ್ತಿನ ಹೊಸ ಕಟ್ಟಡದಲ್ಲಿ ಕೆಎ:05 ಆರ್‌ಟಿಒ ಕಚೇರಿ ಕಾರ್ಯ ನಿರ್ವಹಿಸಲಿದೆ. 11.25 ಕೋಟಿ ರೂ. ವೆಚ್ಚದಲ್ಲಿ 38,793 ಚ.ಅಡಿ ವಿಸ್ತೀರ್ಣದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇದು ಸಾರಿಗೆ ಇಲಾಖೆಯ ಸ್ವಂತ ಕಟ್ಟಡವಾಗಿದೆ.
ಸಾರಿಗೆ ಇಲಾಖೆ ಮಾಹಿತಿ ಪ್ರಕಾರ 18.54 ಲಕ್ಷ ವಾಹನಗಳು ಈ ಕಚೇರಿಯಲ್ಲಿ ನೋಂದಣಿಯಾಗಿವೆ. 70 ವಾಹನ ತರಬೇತಿ ಶಾಲೆಗಳು, 36 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಈ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


