Tuesday, August 4, 2026
spot_img
More
    spot_img
    HomeLatest newsಮುಖ್ಯಮಂತ್ರಿ ಬದಲಾವಣೆ: ರಾಹುಲ್ ಗಾಂಧಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದ ಸಿದ್ದರಾಮಯ್ಯ

    ಮುಖ್ಯಮಂತ್ರಿ ಬದಲಾವಣೆ: ರಾಹುಲ್ ಗಾಂಧಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದ ಸಿದ್ದರಾಮಯ್ಯ

    ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಪಟ್ಟಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಅವರು ಬದ್ಧರಾಗಿರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

    Advertisement

    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಉಪಾಹಾರ ಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಹಾರ ಕೂಟದಲ್ಲಿ ಪಕ್ಷದ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಇದೇ ಎಂಟರಂದು ವಿಧಾನ ಮಂಡಲದ ಅಧಿವೇಶನ ಶುರುವವಾಗಿ, ಎರಡು ವಾರ ನಡೆಯಲಿದೆ. ಅಲ್ಲಿ ಅನುಸರಿಸಬೇಕಾದ ನಮ ರಣನೀತಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

    ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡನೆ ಸೇರಿದಂತೆ, ಹಲವಾರು ವಿಚಾರಗಳನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಅದನ್ನು ಆಕ್ರಮಣಕಾರಿಯಾಗಿ ಎದುರಿಸಲು ನಾವಿಬ್ಬರೂ ಮಾತುಕತೆ ನಡೆಸಿದ್ದೇವೆ ಎಂದು ಸ್ಪಷ್ಟ ಪಡಿಸಿದರು.

    ವಿರೋಧ ಪಕ್ಷದ ನಾಯಕ ಆರ್.ಅಶೋಕ, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಧಾನಮಂಡಲ ಪೂರ್ವಭಾವಿಯಾಗಿ ಚರ್ಚೆ ನಡೆಸಿದ್ದಾರೆ. ರಾಜ್ಯದ ಸಮಸ್ಯೆಗಳನ್ನು ಚರ್ಚೆ ಮಾಡುವ ಸಲುವಾಗಿ ನಾವು ಕೂಡ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

    ಕಬ್ಬು ಬೆಳೆಗಾರರ ಪ್ರತಿಭಟನೆ, ಮೆಕ್ಕೆಜೋಳ ಬೆಲೆ ಕುಸಿತದಂತಹ ಗಂಭೀರ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸಿದ್ದೇವೆ. ಕಬ್ಬು ಬೆಳೆಗಾರರ ಜೊತೆ ಇಡೀ ದಿನ ಚರ್ಚೆ ಮಾಡಿದ್ದು, ಸರ್ಕಾರದಿಂದ ಪ್ರತಿ ಟನ್ ಗೆ ರೂ.50 ನೀಡಲು ನಿರ್ಧರಿಸಲಾಗಿದೆ. ಮೆಕ್ಕೆಜೋಳ ಖರೀದಿಗೆ ಡಿಸ್ಟಲರಿ ಮಾಲೀಕರು, ಕೋಳಿ ಫಾರಂ ನಡೆಸುವವರು ಮತ್ತು ಕೆಎಂಎಫ್ ಜೊತೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂಪಾಯಿ ಯೋಚಿತ ದರ ನಿಗದಿಪಡಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ 2000 ರೂ.ಗಳಿಗಿಂತಲೂ ಕಡಿಮೆ ಬೆಲೆ ಇದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಹೇಳಿದರು.

    ಪ್ರಸಕ್ತ ವರ್ಷದಲ್ಲಿ ಸುಮಾರು 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯ ಅಂದಾಜಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ಬಳಕೆ ಮಾಡುವಂತೆ ಹೇಳುತ್ತಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕೋಳಿ ಫಾರಂ ನಡೆಸುವವರಿಗೆ ಸುಮಾರು 20 ಲಕ್ಷ ಟನ್, ಡಿಸ್ಟಲರಿ ಮಾಲೀಕರು 4-5 ಲಕ್ಷ ಮೆಟ್ರಿಕ್ ಟನ್, ಪಶು ಆಹಾರಕ್ಕಾಗಿ ಕೆಎಂಎಫ್ ನವರು ಸುಮಾರು ಏಳರಿಂದ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದ ಖರೀದಿಸಲು ಸೂಚಿಸಲಾಗಿದೆ. ಅವರೂ ಒಪ್ಪಿದ್ದಾರೆ. ಕೇಂದ್ರ ಮಾರುಕಟ್ಟೆ ಸಂಸ್ಥೆಗಳು ಇದಕ್ಕೆ ಸಹಕರಿಸುತ್ತವೆ ಎಂದರು.

    ಎಥೆನಾಲ್ ಉತ್ಪಾದಕರ ಮೇಲಿನ ನಿಯಂತ್ರಣ ಹಾಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಎಲ್ಲವೂ ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಅವರು ನುಣಚಿಕೊಳ್ಳುತ್ತಿದ್ದಾರೆ. ಡಿ.8ರಂದು ದೆಹಲಿಯಲ್ಲಿ ಸಂಸದರ ಸಭೆ ಕರೆಯುವ ಸಾಧ್ಯತೆ ಇದೆ. ಅಂದು ವಿಧಾನ ಮಂಡಲದ ಅಧಿವೇಶನ ಆರಂಭವಾಗುತ್ತಿದ್ದು, ಹಾಲಿ ಶಾಸಕ ಎಚ್.ವೈ.ಮೇಟಿ ನಿಧನರಾಗಿರುವುದರಿಂದ ಸಂತಾಪದ ಬಳಿಕ ಕಲಾಪ ಮುಂದೂಡಿಕೆ ಆಗಬಹುದು. ಆ ದಿನವೇ ಸಂಸದರ ಸಭೆ ನಡೆಸುತ್ತಿದ್ದೇವೆ ಎಂದರು.

    ದೆಹಲಿಯ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಸಮಯ ಕೊಟ್ಟರೆ ಭೇಟಿ ಮಾಡುತ್ತೇವೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ತಾವು ಮಂಗಳೂರಿನ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸುತ್ತಿದ್ದು, ಅಲ್ಲಿ ಮಾತನಾಡುತ್ತೇವೆ ಎಂದಿದ್ದಾರೆ.

    ಶಾಸಕರು ಯಾವತ್ತೂ ಬೇರೆಯಾಗಿಲ್ಲ, ಕೆಲವರು ಅಭಿಪ್ರಾಯ ಹೇಳಿದ ತಕ್ಷಣ ಪ್ರತ್ಯೇಕ ಬಣ ಎಂದು ಭಾವಿಸಬೇಕಿಲ್ಲ. ನಮೆಲ್ಲಾ ಶಾಸಕರು ಒಟ್ಟಾಗಿ ವಿರೋಧಪಕ್ಷಗಳನ್ನು ಎದುರಿಸುತ್ತಾರೆ. ನಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ವಿಧಾನಮಂಡಳದ ಅಧಿವೇಶನದ ಬಳಿಕವೂ ಇದೇ ಒಗ್ಗಟ್ಟು ಇರಲಿದೆ. ಮುಂದಿನ ದಿನಗಳಲ್ಲೂ ಒಗ್ಗಟಿನಿಂದಲೇ ಸರ್ಕಾರ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

    ಅಧಿವೇಶನ

    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಹ್ವಾನದ ಮೇರೆಗೆ ಬೆಳಗಿನ ಉಪಹಾರಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿದೆ. ಕಾಂಗ್ರೆಸ್ ಪಕ್ಷದ ವಿಚಾರಗಳನ್ನು ಈ ಭೇಟಿಯಲ್ಲಿ ಚರ್ಚಿಸಲಾಗಿದೆ. ಡಿಸೆಂಬರ್ 8 ರಂದು ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದ್ದು, ವಿಪಕ್ಷಗಳನ್ನು ಎದುರಿಸಲು ಸರ್ಕಾರದ ರಣನೀತಿಗಳ ಬಗ್ಗೆ ಇಂದು ಚರ್ಚಿಸಲಾಗಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಿಂದ ತಿಳಿದು ಬಂದಿದೆ.ಅಲ್ಲದೇ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳನ್ನು ಸಮರ್ಥವಾಗಿ ಸರ್ಕಾರ ಎದುರಿಸಲಿದೆ. ಕಬ್ಬು, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ರಾಜ್ಯದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಲು ಈ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದರು.

    ರಾಜ್ಯ ಸಂಸದರ ಸಭೆ

    ಪೌಲ್ಟ್ರಿ 20 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವ ನಿರೀಕ್ಷೆಯಿದೆ. ಪಶುಆಹಾರ 4-5 ಲಕ್ಷ ಟನ್ ಹಾಗೂ 7-10 ಲಕ್ಷದ ಎಥನಾಲ್ ಗಾಗಿ ಬಳಸುತ್ತಾರೆ. ಇದೆಲ್ಲಾ ಕೇಂದ್ರ ಸರ್ಕಾರ ಮಾಡಬೇಕು .ಎಥನಾಲ್ ಹಾಗೂ ಎಂ ಎಸ್ ಪಿ, ಎಫ್ ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೆ ಕೇಂದ್ರ ಸರ್ಕಾರದವರು ನಮಗೇನು ಜವಾಬ್ದಾರಿ ಇಲ್ಲವೆಂಬಂತೆ ಮಾತನಾಡುತ್ತಾರೆ. ಸಂಸದರ ಸಭೆ ಕರೆಯಬೇಕು ಎಂದು ಚರ್ಚಿಸಲಾಗಿದ್ದು, ಡಿಸೆಂಬರ್ 8 ರಂದು ಸಂಸತ್ತು ಮುಂದೂಡಬಹುದೆಂದು ಭಾವಿಸಿದ್ದು, ಅಂದೇ ಸಭೆ ಕರೆಯಬೇಕೆಂದು ತೀರ್ಮಾನಿಸಲಾಗಿದೆ ಎಂದರು. ಏಕೆಂದರೆ ಅಂದು ರಾಜ್ಯದ ಸಂಸದರು ಅಲ್ಲಿಯೇ ಉಪಸ್ಥಿತರಿರುತ್ತಾರೆ ಎಂದರು.

    ಹೈ ಕಮಾಂಡ್ ಭೇಟಿ

    ಸಮಯ ಸಿಕ್ಕು ಭೇಟಿಗೆ ಅವಕಾಶ ನೀಡಿಯೇ ಹೈ ಕಮಾಂಡ್ ಭೇಟಿ ಮಾಡಲಾಗುವುದು.ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರನ್ನು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತೇವೆ ಎಂದರು.

    ಹೈ ಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಮೊನ್ನೆ ಹಾಗೂ ಇಂದೂ ಕೂಡ ಚರ್ಚಿಸಲಾಗಿದೆ.ಶಾಸಕರು ಹಾಗೂ ಸಚಿವರಿಗೆ ಇದನ್ನೇ ಹೇಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಿನಿಂದ ಇದ್ದೇವೆ. ಸಿಎಲ್. ಪಿ ಸಭೆ ಕರೆದಾಗ ಎಲ್ಲರೂ ಊಟಕ್ಕೆ ಸೇರುತ್ತೇವೆ.

    ನಾನು ಹಾಗೂ ಉಪಮುಖ್ಯಮಂತ್ರಿಗಳು ಸಹೋದರರಿದ್ದಂತೆ, ಒಂದೇ ಪಕ್ಷದಲ್ಲಿದ್ದು, ಒಂದೇ ಸಿದ್ಧಾಂತ ನಂಬಿಕೊಂಡಿದ್ದೇವೆ. 2028 ರ ಚುನಾವಣೆಯಲ್ಲಿಯೂ ಒಟ್ಟಿಗೆ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು.ಪರಮೇಶ್ವರ್ ಅವರು ಸಿಎಂ ಹಾಗೂ ಡಿಸಿಎಂ ಅವರನ್ನು ಉಪಾಹಾರಕ್ಕೆ ಕರೆಯುವುದಾಗಿ ಹೇಳಿರುವ ಬಗ್ಗೆ ಮಾತನಾಡಿ ಅದನ್ನು ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸುತ್ತಾರೆ ಎಂದು ಹೇಳಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading