ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಚರ್ಚೆಗೀಡಾಗಿರುವ ಕನ್ನಡದ ನಿರ್ಮಾಪಕರೆಂದರೆ ಅದು ಯಶ್ ತಾಯಿ ಪುಷ್ಪ ಅರುಣ್‌ಕುಮಾರ್. ನಿರ್ಮಾಣ ಮಾಡಿರುವುದು ಒಂದೇ ಸಿನಿಮಾವಾದರೂ ಅದರ ಕುರಿತಾಗಿ ಅವರು ನೀಡಿದ ಸಂದರ್ಶನಗಳು ಅವರನ್ನು ವೈರಲ್ ಆಗುವಂತೆ ಮಾಡಿದ್ದವು ಹಾಗೂ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದ್ದವು.
ಆರಂಭದ ದಿನಗಳಲ್ಲಿ ನೇರ ಸ್ವಭಾವದ ಮಾತುಗಳು ಎಂಬ ಕಾರಣಕ್ಕೆ ಭಾರೀ ಮೆಚ್ಚುಗೆಗೆ ಪಾತ್ರವಾದ ಅವರ ಸಂದರ್ಶನಗಳು ಬರುಬರುತ್ತಾ ಟ್ರೋಲ್ ಕಂಟೆಂಟ್ ಆಗಿ ಮಾರ್ಪಟ್ಟವು. ಅದರಲ್ಲೂ ನಟಿ ದೀಪಿಕಾ ದಾಸ್ ಬಗ್ಗೆ ಯಶ್ ತಾಯಿ ಮಾಡಿದ ಕಾಮೆಂಟ್ ಭಾರೀ ವಿರೋಧಕ್ಕೆ ಕಾರಣವಾಯಿತು ಹಾಗೂ ವಿವಾದವನ್ನೂ ಸಹ ಹುಟ್ಟುಹಾಕಿತು.
ನಿರೂಪಕಿ ನಿಮ್ಮ ಬ್ಯಾನರ್‌ನ ಎರಡನೇ ಚಿತ್ರಕ್ಕೆ ದೀಪಿಕಾ ದಾಸ್ ಅವರು ನಾಯಕಿಯಂತೆ ಎಂದು ಪ್ರಶ್ನೆಯನ್ನು ಕೇಳಿದ ಕೂಡಲೇ ಇದನ್ನೆಲ್ಲ ಕೇಳಬೇಡಿ, ಇದನ್ನು ನೋಡಿದರೆ ನನ್ನ ಮಗ ನನ್ನ ಬಗ್ಗೆ ಏನು ಎಂದುಕೊಳ್ಳಲ್ಲ ಎಂದೆಲ್ಲ ಆಕ್ರೋಶ ಹೊರಹಾಕುತ್ತಾ ಅವಳ್ಯಾವ ದೊಡ್ಡ ನಟಿ ಅಂತ ಕೇಳ್ತೀರ, ಆಕೆ ಏನು ಸಾಧನೆ ಮಾಡಿದ್ದಾಳೆ ಎಂದು ವಿವಾದ ಹುಟ್ಟುಹಾಕಿದ್ದರು.
ಇದಕ್ಕೆ ಸುಮ್ಮನಿರದ ದೀಪಿಕಾ ದಾಸ್ ಅಮ್ಮ ಆದರೂ ಅಷ್ಟೇ, ದೊಡ್ಡಮ್ಮ ಆದರೂ ಅಷ್ಟೇ, ಪುಷ್ಪಮ್ಮ ಆದರೂ ಅಷ್ಟೇ ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಸಹ ಇಲ್ಲ ಎಂದು ತಿರುಗೇಟು ಕೊಟ್ಟಿದ್ದರು. ದೀಪಿಕಾ ದಾಸ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಕಂಡ ಸ್ವತಃ ಯಶ್ ಅಭಿಮಾನಿಗಳೇ ಯಶ್ ಖಾತೆಯನ್ನು ಉಲ್ಲೇಖಿಸಿ ನಿಮ್ಮ ತಾಯಿಗೆ ಸ್ವಲ್ಪ ತಿಳಿಹೇಳಿ ಎಂದು ಮನವಿ ಮಾಡಿದ್ದರು.
ಹೀಗೆ ಭಾರೀ ಟೀಕೆಗೆ ಒಳಗಾಗಿದ್ದ ದೀಪಿಕಾ ದಾಸ್ ಕುರಿತ ಹೇಳಿಕೆ ಕುರಿತು ಘಾಟಿ ಚಿತ್ರದ ಸುದ್ದಿಗೋಷ್ಟಿಯ ವೇಳೆ ಟಿವಿ9 ಮತ್ತೆ ಪ್ರಶ್ನೆ ಹಾಕಿದ್ದು ಪುಷ್ಮ ಮತ್ತೊಮ್ಮೆ ಫೈರ್ ಆಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದ ಟ್ರೋಲ್‌ಗಳು ಹಾಗೂ ಸುದ್ದಿಗಳ ಬಗ್ಗೆ ಯಶ್ ಏನಾದರೂ ಸಲಹೆ ಕೊಟ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪುಷ್ಪ ಯಾವುದೇ ಸಲಹೆ ನೀಡಿಲ್ಲ, ಅವರ ಬಗ್ಗೆನೂ ಬರಿತಾರೆ, ನನ್ನ ಬಗ್ಗೆಯೂ ಬರಿತಾರೆ, ಅದು ಸಾಮಾನ್ಯವಾಗಿಬಿಟ್ಟಿದೆ, ಸಾರ್ವಜನಿಕವಾಗಿ ಬಂದಾಗ ಅದನ್ನೆಲ್ಲ ಎದುರಿಸುವ ತಾಕತ್ತಿರಬೇಕು. ಅಲ್ಲದೇ ತಾನು ಪರಿಜ್ಞಾನವಿಲ್ಲದೇ ಮಾತನಾಡುವುದಿಲ್ಲ, ಅದು ಈಗ ಅರ್ಥವಾಗದೇ ಇರಬಹುದು, ಮುಂದಿನ ದಿನಗಳಲ್ಲಿ ಅರ್ಥವಾಗುತ್ತೆ ಎಂದು ಉತ್ತರಿಸಿದರು.
ಇನ್ನು ದೀಪಿಕಾ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದರ ಬಗ್ಗೆ ಪ್ರಶ್ನೆ ಹಾಕಿದ್ದಕ್ಕೆ ಅದನ್ನು ನೀವು ಕೇಳಬಾರದು ಎಂದ ಪುಷ್ಪ ಅದನ್ನು ಯಾಕೆ ಹೇಳಿದ್ದೇನೆ ಎನ್ನುವುದು ಅವರಿಗೂ ಗೊತ್ತು, ನನಗೂ ಗೊತ್ತು, ನಿಮಗೆಲ್ಲ ಗೊತ್ತಾಗುವ ಅವಶ್ಯಕತೆ ಇಲ್ಲ ಎಂದರು. ಕೇವಲ ದೀಪಿಕಾಗೆ ಮಾತ್ರವಲ್ಲ ನಮ್ಮ ಯಶ್‌ಗೂ ಸಹ ಹೇಳುತ್ತೇನೆ. ಅವನ್ಯಾವ ದೊಡ್ಡ ಹೀರೊ ಅಂತ, ನಮ್ಮ ಮನೆ ಮಕ್ಕಳಿಗೆ ನಾವು ಹೇಳುತ್ತೇವೆ, ಬೇರೆಯವರಿಗೆ ಏನು ಕಷ್ಟ? ಯಶ್ ಸೂಪರ್‌ಸ್ಟಾರ್ ಅಂತ ನೀವು ಹೇಳ್ತೀರ. ಅಲ್ಲ ಎಂದು ನಾನು ಹೇಳುತ್ತೇನೆ, ಆ ಹಕ್ಕು ನನಗಿದೆ ಎಂದು ಪುಷ್ಪ ಹೇಳಿಕೆ ನೀಡಿದರು.
ಈ ಹಿಂದೆ ಕೊತ್ತಲವಾಡಿ ಎಂಬ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರರಂಗ ಪ್ರವೇಶಿಸಿದ್ದ ಪುಷ್ಪ ಇದೀಗ ತೆಲುಗಿನ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಮೂಲಕ ವಿತರಕಿಯಾಗಿ ಸಹ ಕೆಲಸ ಆರಂಭಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ, ಜೈಲೇ ಗತಿ
ಎಐ ಕೃಷಿ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


