ಆನ್‌ಲೈನ್ ಬೆಟ್ಟಿಂಗ್ ಕರ್ನಾಟಕದಲ್ಲಿ ಕಲ್ಪನೆಗೂ ಮೀರಿ ಹೆಚ್ಚಾಗಿದೆ. ಎಲ್ಲಾ ವಯಸ್ಸಿನವರೂ ಈ ಬೆಟ್ಟಿಂಗ್ ನಶೆಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ 1,193ಕ್ಕೂ ಹೆಚ್ಚು ಪ್ರಕರಣಗಳಿಗೆ ಕಾರಣವಾಗಿದೆ. ಕಡಿವಾಣ ಹಾಕಲು ಸರ್ಕಾರ ಈಗ ನಿರ್ಧರಿಸಿದೆ. ಆದರೂ ಜನರು ಬೆಟ್ಟಿಂಗ್ ಹುಚ್ಚು ಬಿಡುತ್ತಿಲ್ಲ. ಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
2023ರಲ್ಲಿ 415 ಇದ್ದ ಬೆಟ್ಟಿಂಗ್ ಪ್ರಕರಣಗಳ ಸಂಖ್ಯೆಯು ಈ ವರ್ಷದ ಜುಲೈ ಅಂತ್ಯದ ವೇಳೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 451ಕ್ಕೆ ಏರಿಕೆಯಾಗಿದೆ. ನೋಂದಣಿಯಾಗದ ಹಾಗೂ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಕೆಟ್, ಇಸ್ಪೀಟ್‌ನಂತಹ ಆನ್‌ಲೈನ್ ಗೇಮಿಂಗ್ ಆಯಪ್‌ಗಳ ಮೂಲಕ ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರಚೋದಿಸುವವರ ವಿರುದ್ಧ ಈ ವರ್ಷ ರಾಜ್ಯದಲ್ಲಿ 451 ಪ್ರಕರಣಗಳು ದಾಖಲಾಗಿವೆ.
ಆನ್‌ಲೈನ್ ಬೆಟ್ಟಿಂಗ್ ವಿಚಾರದಲ್ಲಿ, ಹುಬ್ಬಳ್ಳಿ-ಧಾರವಾಡ ಅವಳಿನಗರಿಯು ರಾಜ್ಯ ರಾಜಧಾನಿಯಾಗಿದೆ.ಬೆಂಗಳೂರು, ಬಳ್ಳಾರಿ, ಗದಗ, ವಿಜಯನಗರ, ಬೀದರ್ ಹಾಗೂ ಕೋಲಾರ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ.
ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕಳೆದ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ 337 ಮತ್ತು ಬೆಂಗಳೂರು ನಗರದಲ್ಲಿ 240 ಪ್ರಕರಣಗಳು ದಾಖಲಾಗಿವೆ. ವಿಜಯನಗರದಲ್ಲಿ 84, ಬಳ್ಳಾರಿಯಲ್ಲಿ 73, ಗದಗದಲ್ಲಿ 72, ಕೋಲಾರದಲ್ಲಿ 48, ಬೆಳಗಾವಿಯಲ್ಲಿ 33, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ 29 ಪ್ರಕರಣಗಳು ದಾಖಲಾಗಿವೆ. ಚಿಕ್ಕಬಳ್ಳಾಪುರದಲ್ಲಿ 15 ಪ್ರಕರಣಗಳಿದ್ದರೆ, ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ, ರಾಯಚೂರು, ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


