ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿದ ಚಿನ್ಯಯ್ಯದ ದೂರಿನ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಸದ್ಯ ಚಿನ್ನಯ್ಯನ ವಿಚಾರಣೆಯನ್ನು ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸೌಜನ್ಯ ಪ್ರಕರಣವನ್ನೂ ಸಹ ಕೈಗೆತ್ತಿಕೊಂಡಂತೆ ಕಾಣುತ್ತಿದೆ.
ಸೌಜನ್ಯ ತಾಯಿ ಕುಸುಮಾವತಿ ನೀಡಿದ ದೂರಿನ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ ಎಸ್‌ಐಟಿ ಅಧಿಕಾರಿಗಳ ಈಗಿನ ನಡೆ. ಅಧಿಕಾರಿಗಳು ಈ ಹಿಂದೆ ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿ ಸಿಬಿಐ ಹಾಗೂ ಸಿಐಡಿ ತನಿಖೆ ಎದುರಿಸಿ ಕ್ಲೀನ್ ಚಿಟ್ ಪಡೆದಿದ್ದ ಉದಯ್ ಕುಮಾರ್ ಜೈನ್‌ಗೆ ಕರೆ ಮಾಡಿ ಕಚೇರಿಗೆ ಆಗಮಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಈ ಮೇರೆಗೆ ಇಂದು ( ಸೆಪ್ಟೆಂಬರ್ 3 ) ಬೆಳಗ್ಗೆಯೇ ಬೆಳ್ತಂಗಡಿ ಎಸ್‌ಐಟಿ ಕಚೇರಿ ಮುಂದೆ ಉದಯ್ ಕುಮಾರ್ ಜೈನ್ ಪ್ರತ್ಯಕ್ಷವಾಗಿದ್ದು, ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.
ಈ ವೇಳೆ ತಮ್ಮನ್ನು ಎಸ್‌ಐಟಿ ಅಧಿಕಾರಿಗಳು ಅಸ್ತಿಪಂಜರದ ಪ್ರಕರಣದ ಕುರಿತು ಕರೆದಿದ್ದಾರೋ ಅಥವಾ ಸೌಜನ್ಯ ಪ್ರಕರಣದ ಕುರಿತು ವಿಚಾರಣೆಗೆ ಕರೆದಿದ್ದಾರೋ ಎಂಬುದನ್ನು ತಿಳಿಸಿಲ್ಲ ವಿಚಾರಣೆಯ ಬಳಿಕವಷ್ಟೇ ತಿಳಿಯಲಿದೆ ಎಂದ ಉದಯ್ ಕುಮಾರ್ ಜೈನ್ ಇದೂ ಸಹ ಬುರುಡೆ ಕೇಸ್ ರೀತಿಯ ಷಡ್ಯಂತ್ರ ಎಂದು ಆರೋಪಿಸಿದರು.
ಒಂದು ಚಿತ್ರ ಮಂಕಾಗಬೇಕೆಂದರೆ ಇನ್ನೊಂದು ಚಿತ್ರವನ್ನು ಆರಂಭಿಸಬೇಕು ಎನ್ನುವ ಹಾಗೆ ಬುರುಡೆ ಫಿಲ್ಮ್ ಮರೆಮಾಚಲು ಈ ಫಿಲ್ಮ್ ಆರಂಭಿಸಿದ್ದಾರೆ ಎಂದು ಸೌಜನ್ಯ ತಾಯಿ ವಿರುದ್ಧ ಕಿಡಿಕಾರಿದರು. ಇನ್ನು ಸೌಜನ್ಯ ತಾಯಿ ನೀಡಿರುವ ದೂರಿನ ಮೇರೆಗೆ ತಮ್ಮನ್ನು ವಿಚಾರಣೆಗೆ ಕರೆದಿರುವ ಸಾಧ್ಯತೆಗಳಿವೆ ಎಂದ ಉದಯ್ ಕುಮಾರ್ ಜೈನ್ ಸೌಜನ್ಯ ಶವ ಪತ್ತೆಯಾದಾಗ ನನ್ನ ಹೆಸರು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಇರಲಿಲ್ಲ ಎಂದರು. ಒಂದು ವರ್ಷದ ಬಳಿಕ ಯಾರ ಯಾರ ಹೆಸರನ್ನು ಹಾಕಬೇಕೆಂದು ಬ್ಲೂ ಪ್ರಿಂಟ್ ತಯಾರಿಸಿ ತನ್ನ ಹೆಸರನ್ನು ಸೇರಿಸಲಾಯಿತು ಎಂದು ಆರೋಪಿಸಿದರು.
ಅಲ್ಲದೇ ಇದೇ ವೇಳೆ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಅವರ ಮಗನ ಹೆಸರನ್ನೂ ಸಹ ಇದರಲ್ಲಿ ಹಾಕಿದ್ದರು, ಆದರೆ ಆ ಸಮಯದಲ್ಲಿ ಅವರು ಊರಿನಲ್ಲೇ ಇರಲಿಲ್ಲ. ಇದರಲ್ಲಿಯೇ ಅವರದ್ದು ಸುಳ್ಳು ಎಂಬುದು ಗೊತ್ತಾಗಲಿದೆ ಎಂದು ಉದಯ್ ಕುಮಾರ್ ಜೈನ್ ಇದೆಲ್ಲ ಸೌಜನ್ಯ ತಾಯಿ ಹಾಗೂ ಗಿರೀಶ್ ಮಟ್ಟಣ್ಣವರ್ ಅವರ ತಂಡದ ಪಿತೂರಿ ಎಂದರು.
ಅಲ್ಲದೇ ಸೌಜನ್ಯ ತಾಯಿ ಇದರಿಂದ ಹಣ ಸಂಪಾದನೆ ಮಾಡಿಕೊಂಡು ಮನೆ ಕಟ್ಟಿಕೊಂಡರು, ತಮ್ಮನ್ನು ದಿಕ್ಕಪಾಲು ಮಾಡಿದರು ಎಂದ ಉದಯ್ ಕುಮಾರ್ ಜೈನ್ ಅವರ ಮನೆ ಮೇಲೆ ಇಡಿ ರೈಡ್ ಆಗಬೇಕು ಎಂದು ಆಗ್ರಹಿಸಿ ಆಕ್ರೋಶ ಹೊರಹಾಕಿದರು. ಒಟ್ಟಿನಲ್ಲಿ ಈ ಹಿಂದೆ ಅಕ್ರಮ ನಡೆದಿದೆ ಎನ್ನಲಾದ ಸೌಜನ್ಯ ಕೇಸ್ ಮರು ತನಿಖೆ ಆಗುತ್ತದೆ ಎಂಬ ಸೂಚನೆಗಳು ಹೊರಬರುತ್ತಿದ್ದು, ಇದು ಸೌಜನ್ಯ ಪರ ಹೋರಾಟಗಾರರಿಗೆ ನೆಮ್ಮದಿಯ ವಿಚಾರವೇ ಸರಿ.
ಮುಂದುವರಿಯಲಿದೆ ಚಿನ್ನಯ್ಯನ ವಿಚಾರಣೆ
ಮತ್ತೊಂದೆಡೆ ಚಿನ್ನಯ್ಯನ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಆತನ ಕಸ್ಟಡಿ ವಿಸ್ತರಣೆ ಕೋರಿ ಕೋರ್ಟ್ ಮೆಟ್ಟಿಲೇರಲಿದೆ. ನಿನ್ನೆಗೆ ಆತನ ಎಸ್‌ಐಟಿ ಕಸ್ಟಡಿ ಅವಧಿ ಮುಗಿದಿದ್ದು, ಇನ್ನೂ ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ತೆರಳಲಿದೆ.
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಕಾಂಗ್ರೆಸ್ ಶಾಸಕರಿಂದಲೂ ಧರ್ಮಸ್ಥಳ ಯಾತ್ರೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


