ಕರ್ನಾಟಕ ರಾಜಕೀಯದ ಭಾರೀ ಚರ್ಚೆಯ Breakfast Meeting ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದರು. ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಉಪಹಾರಕೂಟದ ರೂವಾರಿಯೇ ಕೆ.ಸಿ.ವೇಣುಗೋಪಾಲ್.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿದ್ದಾರೆ. ಮಂಗಳೂರಿನ ಉಳ್ಳಾಲದಲ್ಲಿ ಗಾಂಧಿ-ಗುರು ಸಂವಾದದ 100 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್‌ಗೆ ಆಹ್ವಾನವಿಲ್ಲ. ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ), ಕೇರಳದ ಸಂಸದ ಕೆ.ಸಿ.ವೇಣುಗೋಪಾಲ್‌ಗೆ ಆಹ್ವಾನ ನೀಡಲಾಗಿದೆ. ಆದ್ದರಿಂದ ಅವರು ಮಂಗಳೂರು ನಗರಕ್ಕೆ ಆಗಮಿಸಿದ್ದಾರೆ.
ಆದ್ದರಿಂದ ಸಿಎಂ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಅವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿದರು. ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ನವೆಂಬರ್ 29ರಂದು ನಡೆದ ಉಪಾಹಾರ ಕೂಟ, ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದಲ್ಲಿರುವ ಮನೆಯಲ್ಲಿ ಮಂಗಳವಾರ ನಡೆದ ಉಪಹಾರ ಕೂಟದ ಬಳಿಕ ಸಿದ್ದರಾಮಯ್ಯ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ್ದಾರೆ.
ಈ ಭೇಟಿ ಕುರಿತು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಇಂದು ಮಂಗಳೂರಿನ ಅತಿಥಿ ಗೃಹದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ’ ಎಂದು ಹೇಳಿದ್ದಾರೆ. ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ನವೆಂಬರ್ 29ರ ಉಪಹಾರಕೂಟದ ಬಳಿಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು, ‘ಪಕ್ಷದ ವರಿಷ್ಠರ ಸೂಚನೆಯಂತೆ ಡಿ.ಕೆ.ಶಿವಕುಮಾರ್ ಮತ್ತು ನಾನು ನಮ್ಮ ಮನೆಯಲ್ಲಿ ಒಟ್ಟಿಗೆ ಉಪಹಾರ ಸೇವಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣವಾಗಿವೆ. ನಾವು ಈ ಬಗ್ಗೆ ಮಾತನಾಡಿದ್ದೇವೆ’ ಎಂದು ಸಿದ್ದರಾಮಯ್ಯ ಹೇಳಿದ್ದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಟ್ಟಿಗೆ ಉಪಹಾರಕೂಟ ನಡೆಸುವಂತೆ ಸೂಚನೆ ನೀಡಿದ್ದು ಕೆ.ಸಿ.ವೇಣುಗೋಪಾಲ್. ಈ ಕುರಿತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರಿಗೂ ಸಹ ಅವರು ಕರೆ ಮಾಡಿದ್ದರು.
ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಉಪಹಾರಕೂಟದ ಸಂದರ್ಭದಲ್ಲಿಯೇ ಡಿ.ಕೆ.ಶಿವಕುಮಾರ್ ತಮ್ಮ ಮನೆಗೆ ಉಪಹಾರಕ್ಕೆ ಬರುವಂತೆ ಸಿದ್ದರಾಮಯ್ಯ ಆಹ್ವಾನಿಸಿದ್ದರು. ಮಂಗಳವಾರ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಇಡ್ಲಿ, ನಾಟಿಕೋಳಿ ಸಾರು ಉಪಹಾರವನ್ನು ಸಿದ್ದರಾಮಯ್ಯ ಸವಿದಿದ್ದರು.
ಉಪಹಾರಕೂಟದ ಬಳಿಕ ಸಿದ್ದರಾಮಯ್ಯ ಮಾತನಾಡಿ, “ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ ಎಂದು ನಾವಿಬ್ಬರೂ ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಲೀ ಯಾರೂ ನಮ್ಮ ಸರ್ಕಾರದ ವಿರುದ್ಧವಿಲ್ಲ” ಎಂದು ಹೇಳಿದ್ದರು.
“ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲಗಳನ್ನು ತಿಳಿಗೊಳಿಸುವಂತೆ ಹೈಕಮಾಂಡ್‌ನವರು ಸೂಚಿಸಿದ್ದಾರೆ. ಈಗಲೂ ಯಾವ ಗೊಂದಲ ಇಲ್ಲ, ನಾಳೆಯೂ ಯಾವುದೇ ಗೊಂದಲ ಇರುವುದಿಲ್ಲ. ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ ಹೈಕಮಾಂಡಿಗೆ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದ್ದರು.
“ಆದರೆ ಗೊಂದಲ ಸೃಷ್ಟಿಯಾಗಿರುವುದು ಕೆಲವು ಮಾಧ್ಯಮಗಳಿಂದ. ಕೆಲವು ಶಾಸಕರು ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ದೆಹಲಿಗೆ ಭೇಟಿ ನೀಡಿರಬಹುದು. ಹಾಗೆಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕೆಲವರು ನನ್ನ ಬಳಿ ತಾವು ಇಂತಹ ಕಾರಣಕ್ಕೆ ದೆಹಲಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ” ಎಂದು ಸ್ಪಷ್ಟಪಡಿಸಿದ್ದರು.
ಡಿ.ಕೆ.ಶಿವಕುಮಾರ್ ಮಾತನಾಡಿ, “ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೇಳುತ್ತೇವೆ. ರಾಜಕೀಯವಾಗಿ ನಮ್ಮಿಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಹಿಂದೆಯೂ ಕೆಲಸ ಮಾಡಿಕೊಂಡು ಬಂದಿದ್ದೇವೆ, ಮುಂದೆಯೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ, ಇರೋದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಗುಂಪುಗಾರಿಕೆಗೆ ಹಿಂದೆಯೂ ಅವಕಾಶ ಕೊಡಲಿಲ್ಲ, ಈಗಲೂ ಕೊಡಲ್ಲ, ಅದರ ಅವಶ್ಯಕತೆಯೂ ಇಲ್ಲ. ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತೇವೆ” ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


