ಕರ್ನಾಟಕ ಸರ್ಕಾರ ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿತ್ತು. ಬಳಿಕ ಈ ಕುರಿತು ರಾಜ್ಯಪತ್ರದಲ್ಲಿ ಆದೇಶವನ್ನು ಹೊರಡಿಸಲಾಗಿತ್ತು. ಈಗ ಮಹಿಳಾ ಸರ್ಕಾರಿ ನೌಕರರಿಗೆ ಈ ರಜೆ ಮಂಜೂರು ಮಾಡುವ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಅಜಯ್ ಎಸ್. ಕೊರಡೆ, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ.
ಆದೇಶ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರಿಗೆ ಋತುಚಕ್ರ ರಜಾ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದ್ದು, ಸರ್ಕಾರಿ ಆದೇಶ ಸಂಖ್ಯೆ :ಕಾಇ 466 ಎಲ್ಇಟಿ 2023, ದಿನಾಂಕ 12.11.2025 ಉಲ್ಲೇಖಿಸಲಾಗಿದೆ.
ಪ್ರಸ್ತಾವನೆ: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳು ಒಂದು ದಿನದಂತೆ ವಾರ್ಷಿಕ 12 ದಿನಗಳ ವೇತನಸಹಿತ ರಜೆಯ ಸೌಲಭ್ಯವನ್ನು ಸರ್ಕಾರಿ ಆದೇಶದಲ್ಲಿ ಮಂಜೂರು ಮಾಡಲಾಗಿದೆ.
ರಾಜ್ಯ ಮಹಿಳಾ ಸರ್ಕಾರಿ ನೌಕರರ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಲು ಸರ್ಕಾರವು ತೀರ್ಮಾನಿಸಿ ಆದೇಶಿಸಿದೆ.
ಆದೇಶದ ವಿವರ: ಸರ್ಕಾರವು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಕೆಳಕಂಡ ಷರತ್ತುಗಳಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶಿಸಿದೆ.
* ಋತುಚಕ್ರ ಹೊಂದಿರುವ 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
* ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ.
* ಈ ರಜೆಯನ್ನು ರಜೆ/ ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.
* ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ.
ಋತುಚಕ್ರ ರಜೆ ಪ್ರಸ್ತಾವನೆ: ರಾಜ್ಯದಲ್ಲಿ ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961 ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿ ಅವರ ಮನೋಸ್ಥೆರ್ಯವನ್ನು ಹೆಚ್ಚಿಸಲು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ವೇತನ ಸಹಿತ ರಜೆಯನ್ನು ಮಂಜೂರು ಮಾಡಲು ಅಧಿಸೂಚನೆ ಹೊರಡಿಸುವ ಸಂಬಂಧ ಚರ್ಚಿಸಿ ವರದಿ ಸಲ್ಲಿಸಲು ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು, ತಜ್ಞವೈದ್ಯರು, ಕಾರ್ಮಿಕ ವರ್ಗಗಳ ಪ್ರತಿನಿಧಿಗಳು, ಕೈಗಾರಿಕಾ ಸಂಘದ ಪ್ರತಿನಿಧಿಗಳು, IT/ BT ಪ್ರತಿನಿಧಿ, ಗಾರ್ಮೆಂಟ್ಸ್ ಮಾಲೀಕರ ಪ್ರತಿನಿಧಿ, ಪ್ರಾಧ್ಯಾಪಕರು, ಸಮಾಜ ಸೇವಕರು, ಮಾಲೀಕ ವರ್ಗದ ಪ್ರತಿನಿಧಿಗಳು, ಇತರೆ ಸದಸ್ಯರುಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.
ಸದರಿ ತಜ್ಞರ ಸಮಿತಿಯು ವಿವಿಧ ಹಂತಗಳಲ್ಲಿ ಚರ್ಚಿಸಿ ಕಾರ್ಖಾನೆಗಳು, ಪ್ಲಾಂಟೇಷನ್, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಮೊದಲಾದವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಅವರ ಋತುಚಕ್ರದ ಸಮಯದಲ್ಲಿ ವಾರ್ಷಿಕ 6 ಋತುಸ್ರಾವ ರಜೆಗಳನ್ನು ಬಳಸಿಕೊಳ್ಳಲು ಋತುಚಕ್ರ ರಜಾನೀತಿ ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಿದ್ದು, ಮಹಿಳಾ ನೌಕರರಿಗೆ ವೇತನ ಸಹಿತ ಋತುಸ್ರಾವದ ರಜೆ ನೀಡುವ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಅನುಕೂಲವಾಗುವಂತೆ ಕಾರ್ಖಾನೆಗಳು, ಕೈಗಾರಿಕೆಗಳು ಮತ್ತು ಇತರೆ ಉದ್ದಿಮೆಗಳ ಮಾಲೀಕರು, ವಿವಿಧ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರ ಗಮನಕ್ಕಾಗಿ ಹಾಗೂ ಸಲಹೆ, ಸೂಚನೆ, ಆಕ್ಷೇಪಣೆ/ ಅಭಿಪ್ರಾಯ ಕೋರಿ ಇಲಾಖೆಯ ವೆಬ್ಸೈಟ್ karmikaspandana.gov.in ಸೇರಿದಂತೆ ದಿನಾಂಕ 18-10-2025 ರಂದು ಪ್ರಕಟಿಸಲಾಗಿರುತ್ತದೆ.
ಕಾರ್ಮಿಕರು, ಕಾರ್ಮಿಕ ಸಂಘಗಳು, ಮಾಲೀಕರು, ಮಾಲೀಕ ಸಂಘಗಳು, ಮಹಿಳಾ ಸಂಘಟನೆಗಳು, ಸಾರ್ವಜನಿಕರು, ಸರ್ಕಾರಿ ನೌಕರರ ಒಕ್ಕೂಟ ಮೊದಲಾದವರಿಂದ ಪ್ರಸ್ತಾಪಿತ ಋತುಚಕ್ರ ರಜಾನೀತಿಯ ಸಂಬಂಧ ಒಟ್ಟು 75 ಅಭಿಪ್ರಾಯಗಳು ಸ್ವೀಕೃತವಾಗಿದ್ದು, ಈ ಪೈಕಿ 56 ಅಭಿಪ್ರಾಯಗಳು ಪ್ರಸ್ತಾಪಿತ ಋತುಚಕ್ರ ರಜಾನೀತಿಯ ಪರವಾಗಿರುತ್ತವೆ. ಉಳಿದಂತೆ 19 ಅಭಿಪ್ರಾಯಗಳು ವಿರುದ್ಧವಾಗಿರುತ್ತವೆ. ಉದ್ದೇಶಿತ ರಜಾನೀತಿಯನ್ನು ಬೆಂಬಲಿಸಿ ಸ್ವೀಕೃತವಾದ 56 ಅಭಿಪ್ರಾಯಗಳಲ್ಲಿ, 26 ಅಭಿಪ್ರಾಯಗಳು ಮಾಲೀಕ ವರ್ಗದವರು, 7 ಕಾರ್ಮಿಕ ಸಂಘಗಳು, 19 ನೌಕರರು, 1 ಸಾರ್ವಜನಿಕರು, 1 ಸರ್ಕಾರಿ ನೌಕರರ ಒಕ್ಕೂಟ, 2 ಮಹಿಳಾ ಸಂಘಗಳು ನೀಡಿರುತ್ತಾರೆ. ಅಲ್ಲದೇ ಪಸ್ತಾಪಿತ ಋತುಚಕ್ರ ರಜಾನೀತಿಯನ್ನು ಬೆಂಬಲಿಸಿರುವ ಕಾರ್ಮಿಕ/ ಕಾರ್ಮಿಕ ಸಂಘಟನೆ/ ಮಹಿಳಾ ಸಂಘಟನೆ/ ಆಡಳಿತ ವರ್ಗದವರ 56 ಅಭಿಪ್ರಾಯಗಳಲ್ಲಿ 10 (10 ಅಭಿಪ್ರಾಯಗಳಲ್ಲಿ 4 ಆಡಳಿತ ವರ್ಗದ ಅಭಿಪ್ರಾಯಗಳು) ಅಭಿಪ್ರಾಯಗಳು ಪ್ರಸ್ತಾಪಿಸಿರುವ ವಾರ್ಷಿಕ 6 ರಜೆಗಳಿಗೆ ಬದಲಾಗಿ 12 ರಜೆಗಳನ್ನು ನೀಡುವಂತೆ ಕೋರಲಾಗಿರುತ್ತವೆ.
ಪ್ರಸ್ತಾಪಿತ ಋತುಚಕ ರಜಾನೀತಿಯ ಪರವಾಗಿ ಹೆಚ್ಚಿನ ಅಭಿಪ್ರಾಯಗಳು ಸ್ವೀಕೃತಗೊಂಡಿರುವುದರಿಂದ ಹಾಗೂ ಸದರಿ ರಜಾನೀತಿಯನ್ನು ರೂಪಿಸುವುದರಿಂದ ವಿವಿಧ ಉದ್ದಿಮೆಗಳಲ್ಲಿ ದುಡಿಯುವ ಮಹಿಳಾ ನೌಕರರ ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲ್ಪಟ್ಟು, ಅವರ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದಾಗಿ ಉತ್ಪಾದನಾ ಚಟುವಟಿಕೆಗಳಲ್ಲಿ ಮಹಿಳಾ ನೌಕರರ ಭಾಗವಹಿಸುವಿಕೆ ಹೆಚ್ಚಿ ದೇಶದ ಉತ್ಪಾದನೆ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಹಾಗೂ ಋತುಚಕ್ರದ ರಜಾನೀತಿಯನ್ನು ರೂಪಿಸುವುದರಿಂದ ಮಹಿಳಾ ದುಡಿಮೆಗೆ ಸಂಬಂಧಿಸಿದಂತೆ ಕರ್ನಾಟಕವು ಒಂದು ಜಾಗತಿಕ ಉತ್ತಮ ಅಭ್ಯಾಸವನ್ನು ಹೊಂದಿದಂತಾಗುತ್ತದೆ ಎಂದು ಆಯುಕ್ತರು, ಕಾರ್ಮಿಕ ಇಲಾಖೆ, ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ “ಋತುಚಕ್ರ ರಜೆ ನೀತಿ 2025” ಅನ್ನು ಜಾರಿಗೆ ತರಲು ಸಚಿವ ಸಂಪುಟವು ಅನುಮೋದಿಸಿರುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


