ಬೆಂಗಳೂರು: ಯಜಮಾನ 2000ನೇ ಇಸವಿಯಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತ್ತು. 2 ಕೋಟಿ ವೆಚ್ಚದ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ 20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ 20 ಕೋಟಿ ಗಳಿಸಿದ ಚಿತ್ರ ಎಂಬ ದಾಖಲೆ ನಿರ್ಮಿಸಿತ್ತು.
1998ರಲ್ಲಿ ಬಿಡುಗಡೆಯಾಗಿ 15 ಕೋಟಿ ಗಳಿಕೆ ಮಾಡಿದ್ದ ಉಪೇಂದ್ರ ನಿರ್ದೇಶನದ ʼಎʼ ಚಿತ್ರದ ದಾಖಲೆಯನ್ನು ಮುರಿದು ಚಂದನವನದ ಹೊಸ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಇಂತಹ ಮಹಾನ್ ಚಿತ್ರಕ್ಕೆ 25 ವರ್ಷಗಳು ಕಳೆದಿದ್ದು ಅದರ ನಿರ್ಮಾಪಕ ರಹಮಾನ್ 25 ವರ್ಷಗಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಇನ್ನು ಚಿತ್ರದಲ್ಲಿ ನಟಿಸಿದ್ದ ಶಶಿಕುಮಾರ್, ರಮೇಶ್ ಭಟ್ ಸೇರಿ ಹಲವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದರು. ಆದರೆ ಚಿತ್ರದ ನಾಯಕಿ ನಟಿ ಪ್ರೇಮ ಗೈರಾಗಿದ್ದರು. ಈ ಕುರಿತು ವೇದಿಕೆಯಲ್ಲಿಯೇ ಕೆಂಡಾಮಂಡಲವಾದ ನಿರ್ಮಾಪಕ ರಹಮಾನ್ ʼಪ್ರೇಮಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆದರೆ ಆಕೆ ಟಿವಿಯಲ್ಲಿ ಮಹಾನಟಿ ಎಂಬ ಕಾರ್ಯಕ್ರಮ ಮಾಡುತ್ತಿದ್ದು, ಅಲ್ಲಿಗೆ ಹೋಗಬೇಕು, ಬರುವುದಿಲ್ಲ ಎಂದಳು. ಬಿಡಮ್ಮ ನೀನು ದೊಡ್ಡ ಮಹಾನಟಿ ನೀನು ಬೇಡ ಎಂದೆ. ಅವರಿಗೆ ಈ ಚಿತ್ರಕ್ಕಿಂತ ಮಹಾನಟಿ ಎಂಬ ಕಾರ್ಯಕ್ರಮ ದೊಡ್ಡದಂತೆʼ ಎಂದರು.
ಹೀಗೆ ಪ್ರೇಮ ವಿರುದ್ಧ ರಹಮಾನ್ ಮುಕ್ತವಾಗಿ ಟೀಕೆ ನಡೆಸಲು ಆರಂಭಿಸುತ್ತಿದ್ದಂತೆ ಅಕ್ಕಪಕ್ಕ ಇರುವವರು ರಹಮಾನ್ ಅವರನ್ನು ಮುಟ್ಟಿ ಬೇಡ ಎಂದು ಸನ್ನೆ ಮಾಡಿದರು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ರಹಮಾನ್ ʼಏಯ್.. ನಾನು ಹೆದರಿಕೊಳ್ಳಲ್ಲ ಯಾರಿಗೂ ನೇರವಾಗಿಯೇ ಹೇಳುತ್ತೇನೆ. ಅವಳನ್ನು ನಟಿಯನ್ನಾಗಿ ಹಾಕಿಕೊಂಡದ್ದು ನಾನು. ನಾನೇಕೆ ಆಕೆಗೆ ಹೆದರಿಕೊಳ್ಳಲಿ? ವಿಷ್ಣು ಸರ್ ಬೇಡ ಎಂದರು. ಆಗ ವಿಷ್ಣು ಸರ್‌ನ ನಾನು ಕಷ್ಟಪಟ್ಟು ಒಪ್ಪಿಸಿದ್ದೇನೆ. ಅವಾಗ ಅಡ್ವಾನ್ಸ್ ತೆಗೆದುಕೊಂಡಾಗ ಗೊತ್ತಿತ್ತಾ ರಹಮಾನ್ ಯಾರು ಅಂತ? ಈಗ ಮಹಾನಟಿನಾ? ಏನು ಅಹಂಕಾರ ನಿಂದು? ಮಹಾನಟಿಯಂತೆ ಅಬ್ಬಬ್ಬಾ.. ಯಜಮಾನ ಮಾಡಿದಮೇಲೆ ಮಹಾನಟಿ ನೀನು, ಯಜಮಾನ ಮಾಡುವ ಮುಂಚೆ ಯಾವ ನಟಿ ನೀನು?ʼ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಅಲ್ಲದೇ ಭಾರತಿ ಮೇಡಂ ಅವರಿಗೆ ಆರೋಗ್ಯ ಸರಿಯಿಲ್ಲ ಹಾಗಾಗಿ ಕರೆಯುವುದು ಬೇಡ ಎಂದುಕೊಂಡೆ, ಶಶಿಕುಮಾರ್ ಅವರಿಗೆ ಕರೆ ಮಾಡಿದ ಕೂಡಲೇ ಬಂದರು, ರಮೇಶ್ ಭಟ್ ವಿಷ್ಣು ಸರ್ ಸಮಕಾಲೀನರು ಅವರೇ ಬರುತ್ತೇನೆ ಎಂದರು ಎಂದು ಉದಾಹರಣೆ ಕೊಟ್ಟು ಪ್ರೇಮ ವಿರುದ್ಧ ಚಾಟಿ ಬೀಸಿದರು ನಿರ್ಮಾಪಕ ರಹಮಾನ್.
ಮೂತ್ರಪಿಂಡಕ್ಕೆ ಡೈಪರ್ ಅಪಾಯ: ವೈರಲ್ ವೀಡಿಯೊ ಕೇವಲ ವದಂತಿ! ತಜ್ಞರ ಸ್ಪಷ್ಟನೆ: ನಿಜವಾದ ಕಂಟಕ ಕಳಪೆ ನೈರ್ಮಲ್ಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


