ಕರ್ನಾಟಕದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 3 ದಿನದ ವೇತನ ಸಹಿತ ರಜೆಗಾಗಿ ಪತ್ರವನ್ನು ಬರೆದಿದ್ದಾರೆ. ಭಾನುವಾರ ಅವರು ರಜೆಗಾಗಿ ಮನವಿ ಮಾಡುತ್ತೇನೆ ಎಂದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.
ಬಿಹಾರ ವಿಧಾನಸಭೆ ಚುನಾವಣೆ-2025ರ ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್ ಮೂರು ದಿನದ ವೇತನ ಸಹಿತ ರಜೆಗಾಗಿ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಬಿಹಾರಿಗಳು ಮತದಾನ ಮಾಡಲು ಅನುಕೂಲವಾಗುವಂತೆ ಈ ರಜೆ ನೀಡಲಾಗುತ್ತದೆ.
ಪತ್ರದ ವಿವರ: ಡಿ.ಕೆ.ಶಿವಕುಮಾರ್ ಮನವಿ ಪತ್ರದಲ್ಲಿ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ-2025 ನವೆಂಬರ್ ಮಾಹೆಯ ದಿನಾಂಕ 06/11/2025 ಮತ್ತು 11/11/2025 ರಂದು ನಡೆಯಲಿದೆ ಎಂದು ಹೇಳಿದ್ದಾರೆ.
ಬಿಹಾರದ ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಕಂಪನಿಗಳು, ವಾಣಿಜ್ಯ ಉದ್ಯಮಿಗಳು, ಹೋಟೆಲ್‌ಗಳು, ಗುತ್ತಿಗೆದಾರರು, ಬಿಲ್ಡರ್‌ಗಳು ಅಂಗಡಿ ಮುಂಗಟ್ಟುಗಳು ಹಾಗೂ ಇತರೆ ಉದ್ದಮೆದಾರರು ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಮತವನ್ನು ಚಲಾಯಿಸಲು ಅನುವಾಗುವಂತೆ ಬಿಹಾರ ರಾಜ್ಯದ ಮತದಾರರಾದವರಿಗೆ ಕನಿಷ್ಟ ಮೂರು ದಿನಗಳ ‘ವೇತನ ಸಹಿತ ರಜೆ’ ಯನ್ನು ನೀಡಲು ಮತ್ತು ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಹಕರಿಸಲು ಕೋರುತ್ತೇನೆ ಎಂದು ತಿಳಿಸಿದ್ದಾರೆ.
ಬಿಹಾರ ರಾಜ್ಯದ 243 ಸದಸ್ಯ ಬಲದ ವಿಧಾನಸಭೆಗೆ 2 ಹಂತದಲ್ಲಿ ಮತದಾನ ನಡೆಯಲಿದೆ. 121 ಸೀಟುಗಳಿಗೆ ಮೊದಲ ಹಂತದಲ್ಲಿ ನವೆಂಬರ್ 6ರಂದು ಮತದಾನ ನಡೆಯಲಿದ್ದು, ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಅಂತಿಮ ದಿನವಾಗಿದೆ.
2ನೇ ಹಂತದಲ್ಲಿ 122 ಸೀಟುಗಳಿಗೆ ನವೆಂಬರ್ 11ರಂದು ಮತದಾನ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಸಹ ಪ್ರಕಟವಾಗಲಿದೆ.
ಬಿಹಾರ ಚುನಾವಣೆ ಪ್ರಚಾರ: ಭಾನುವಾರ ಬೆಂಗಳೂರಿನ ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್‌ನಲ್ಲಿ ‘ಕರ್ನಾಟಕ ಬಿಹಾರ್ ಸಮಾಜ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಹಾರ ಮೂಲದ ಬೆಂಗಳೂರು ನಿವಾಸಿಗಳನ್ನು ಉದ್ದೇಶಿಸಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದರು.
ಕಳೆದ ಎರಡು ದಶಕಗಳಿಂದ ಆಡಳಿತದಲ್ಲಿದ್ದರೂ ಬಿಹಾರ ರಾಜ್ಯವನ್ನು ಅಭಿವೃದ್ಧಿಪಡಿಸುವುದರಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಮೈತ್ರಿಕೂಟ ವಿಫಲವಾಗಿದೆ. ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಮೈತ್ರಿಕೂಟವು ಒಗ್ಗಟ್ಟಾಗಿ ಚುನಾವಣಾ ಕಣಕ್ಕಿಳಿದಿದೆ. ಈ ಚುನಾವಣೆಯಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿಯಲು ಎಲ್ಲರೂ ಬೆಂಬಲಿಸಿ, ಸಹಕರಿಸಬೇಕು ಎಂದು ಕರೆ ನೀಡಿದ್ದರು.
ಅಲ್ಲದೇ, ನವೆಂಬರ್ 6 ಮತ್ತು 11ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ನೆಲೆಸಿರುವ ಬಿಹಾರ ನಿವಾಸಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಕಂಪನಿಗಳು ಮೂರು ದಿನಗಳ ರಜೆ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದರು.
ಬಿಹಾರ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಮಹಾಘಟಬಂಧನ್ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಮೈತ್ರಿಕೂಟದಲ್ಲಿ ಆರ್‌ಜೆಡಿ 143, ಕಾಂಗ್ರೆಸ್ 61, ಸಿಪಿಐ(ಎಂಎಲ್) 20 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಉಳಿದ ಕ್ಷೇತ್ರವನ್ನು ವಿಐಪಿ, ಸಿಪಿಐ(ಎಂ) ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಆರ್‌ಜೆಡಿಯ ತೇಜಸ್ವಿಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ ಮತ್ತು ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಕೇಶ್ ಸಹಾನಿ ಅವರನ್ನು ಡಿಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮಹಾಘಟಬಂಧನ್‌ಗೆ ಎದುರಾಳಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


