Saturday, September 19, 2026
spot_img
More
    spot_img
    HomeStateಮುಡಾ ಹಗರಣ: ಇಡಿ ವಿಚಾರಣೆಗೆ ಹಾಜರಾದ ವಿಶೇಷ ಭೂ ಅಧಿಕಾರಿ ಮಂಜುನಾಥ್‌

    ಮುಡಾ ಹಗರಣ: ಇಡಿ ವಿಚಾರಣೆಗೆ ಹಾಜರಾದ ವಿಶೇಷ ಭೂ ಅಧಿಕಾರಿ ಮಂಜುನಾಥ್‌

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ)ನಿವೇಶನ ಹಂಚಿಕೆ ಸಂಬಂಧ ವಿಶೇಷ ಭೂ ಅಧಿಕಾರಿ(ಎಸ್‍ಎಲ್‍ಓ)ಮಂಜುನಾಥ್ ಅವರು, ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಮುಂದೆ ಇಂದು ( ಡಿಸೆಂಬರ್‌ 4 ) ವಿಚಾರಣೆ ಎದುರಿಸಿದರು.

    Advertisement

    ಬೆಂಗಳೂರಿನ ಶಾಂತಿ ನಗರದಲ್ಲಿರುವ ಇ.ಡಿ.ಕಚೇರಿಗೆ ಒಂದು ಬ್ಯಾಗ್‍ನಲ್ಲಿ ದಾಖಲೆಗಳನ್ನು ಇಟ್ಟುಕೊಂಡು ಬೆಳಿಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾದ ಮಂಜುನಾಥ್ ಅವರನ್ನು ಇ.ಡಿ.ಅಧಿಕಾರಿಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡರು.

    ಮುಡಾದಲ್ಲಿ ವಿಶೇಷ ಭೂ ಅಧಿಕಾರಿಯಾಗಿದ್ದ ಮಂಜುನಾಥ್ ಅವರು, ಕಾನೂನು ಉಲ್ಲಂಘಿಸಿ ಬೇಕಾಬಿಟ್ಟಿ ನಿವೇಶನಗಳನ್ನು ಹಂಚಿ ನೂರಾರು ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪವಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿ ತಮಗೆ ಬೇಕಾದವರಿಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡುವಲ್ಲಿ ಇವರ ಪ್ರಮುಖ ಪಾತ್ರವಿತ್ತು ಎಂಬ ಆರೋಪವಿದೆ.

    ಮೊದಲೇ ಇ.ಡಿ.ಅಧಿಕಾರಿಗಳು ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇಂತಹ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ನಿಮ ಮೇಲೆ ಯಾರಾದರೂ ಪ್ರಭಾವ ಬೀರಿದ್ದರೆ, ಇಲ್ಲವೇ ಸ್ವಯಂ ಪ್ರೇರಿತವಾಗಿ ನೀವೇ ನಿವೇಶನ ಹಂಚಿಕೆ ಮಾಡಿದ್ದೀರ ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.

    ಇದರ ನಡುವೆ ಮುಡಾದಿಂದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಪ್ರಕರಣದಲ್ಲಿ ಹಲವು ಅಕ್ರಮಗಳು ನಡೆದಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿದೆ.

    ಕೇಂದ್ರ ತನಿಖಾ ಸಂಸ್ಥೆ ಪ್ರಕರಣ ಸಂಬಂಧ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇತ್ತೀಚೆಗೆ ಕಳುಹಿಸಿದ ಸಂವಹನದಲ್ಲಿ, ಮುಡಾ ಒಟ್ಟು 1,095 ಸೈಟ್‍ಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ‘ಅಕ್ರಮವಾಗಿ’ ಮಂಜೂರು ಮಾಡಿದೆ ಎಂಬುದು ತನ್ನ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿಕೊಂಡಿದೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ವೇಳೆ, ಭೂಪರಿವರ್ತನೆಯಲ್ಲಿ ಕಾನೂನುಬದ್ಧ ಮಾರ್ಗಸೂಚಿಗಳ ಉಲ್ಲಂಘನೆ', ಕಚೇರಿಯ ಕಾರ್ಯವಿಧಾನಗಳ ಉಲ್ಲಂಘನೆ,ಅನಾವಶ್ಯಕ’ ಕೃಪಾಕಟಾಕ್ಷ ಮತ್ತು ಪ್ರಭಾವದ ಬಳಕೆ ಹಾಗೂ ಸಹಿಗಳ `ಫೋರ್ಜರಿ’ಗೆ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

    ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್ ಜಿ ದಿನೇಶ್ ಕುಮಾರ್ ಅಲಿಯಾಸ್ ಸಿ ಟಿ ಕುಮಾರ್ ಅವರು ಈ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಇಡಿ ಹೇಳಿಕೊಂಡಿದೆ.

    ಮುಡಾದಲ್ಲಿ ಆಪಾದಿತ ಅಕ್ರಮ ಚಟುವಟಿಕೆಗಳು ಪಾರ್ವತಿ ಪ್ರಕರಣದೊಂದಿಗೆ ಕೊನೆಗೊಂಡಿಲ್ಲ. 700 ಕೋಟಿ ರೂ.ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಒಟ್ಟು 1,095 ಸೈಟ್‍ಗಳನ್ನು ‘ಕಾನೂನುಬಾಹಿರವಾಗಿ’ ಹಂಚಿಕೆ ಮಾಡಲಾಗಿದೆ ಎಂದು ಇಡಿ ತನಿಖಾ ವರದಿ ಮತ್ತು ಅಧಿಕೃತ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

    ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ “ಸ್ವಾಧೀನಪಡಿಸಿಕೊಂಡ” ಭೂಮಿಗೆ ಪರ್ಯಾಯವಾಗಿ ಮೈಸೂರಿನ ಉನ್ನತ ಮಾರುಕಟ್ಟೆ ಪ್ರದೇಶದಲ್ಲಿ (ವಿಜಯನಗರ ಲೇಔಟ್ 3 ಮತ್ತು 4ನೇ ಹಂತ) 14 ಪರಿಹಾರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮುಡಾ ಪಾರ್ವತಿ ಅವರಿಗೆ 50:50 ಅನುಪಾತದ ಯೋಜನೆಯಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಮಂಜೂರು ಮಾಡಿತ್ತು. ಅಲ್ಲಿ ಅದು ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಿತ್ತು.

    ವಿವಾದಾತ್ಮಕ ಯೋಜನೆಯಡಿಯಲ್ಲಿ, ವಸತಿ ಬಡಾವಣೆಗಳನ್ನು ರೂಪಿಸಲು ಅವರಿಂದ ಸ್ವಾಧೀನಪಡಿಸಿಕೊಂಡಿರುವ ಅಭಿವೃದ್ಧಿಯಾಗದ ಭೂಮಿಗೆ ಬದಲಾಗಿ ಭೂಮಿ ಕಳೆದುಕೊಳ್ಳುವವರಿಗೆ ಮುಡಾ ಅಭಿವೃದ್ಧಿ ಹೊಂದಿದ ಭೂಮಿಯಲ್ಲಿ 50 ಪ್ರತಿಶತವನ್ನು ಮಂಜೂರು ಮಾಡಿದೆ. ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿನ ಈ 3.16 ಎಕರೆ ಜಮೀನಿನಲ್ಲಿ ಪಾರ್ವತಿ ಅವರಿಗೆ ಯಾವುದೇ ಕಾನೂನು ಬದ್ಧ ಹಕ್ಕು ಇಲ್ಲ ಎಂದು ಆರೋಪಿಸಲಾಗಿದೆ.

    ಕರ್ನಾಟಕ ಲೋಕಾಯುಕ್ತ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯ `ಹಗರಣ’ದ ತನಿಖೆ ಆರಂಭಿಸಿದೆ. ಹಗರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading