ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕಿ, ಎಐಸಿಸಿಯ ಮಾಜಿ ಅಧ್ಯಕ್ಷರು. ಆದರೆ ಸೋನಿಯಾ ಗಾಂಧಿ ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಡಿಸೆಂಬರ್ 9, 11ರಂದು ಎರಡು ಹಂತದಲ್ಲಿ ಕೇರಳ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಪಂಚಾಯತಿಯ ನಲ್ಲತ್ತನ್ನಿ (ವಾರ್ಡ್ ನಂಬರ್ 16) ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಿಜೆಪಿ ಅಭ್ಯರ್ಥಿ. 34 ವರ್ಷದ ಸೋನಿಯಾ ಗಾಂಧಿ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಸಹ ಅವರಿಗೆ ಕಾಂಗ್ರೆಸ್ ಪಕ್ಷದ ನಂಟಿದೆ.
ಕೇರಳದ ಪಂಚಾಯಿತಿ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಹೆಸರು ಸಂಚಲನ ಮೂಡಿಸಿದೆ. ಸೋನಿಯಾ ಗಾಂಧಿ ಪತಿಯ ಜೊತೆ ತೆರಳಿ ಚುನಾವಣಾ ಪ್ರಚಾರ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೋನಿಯಾ ಗಾಂಧಿಗೆ ಚುನಾವಣೆಯಲ್ಲಿ ಗೆಲುವೋ?, ಸೋಲೋ? ಎಂಬ ಚರ್ಚೆಗಳು ನಡೆಯುತ್ತಿವೆ.
ಸೋನಿಯಾ ಗಾಂಧಿ ಕಾಂಗ್ರೆಸ್ ನಂಟು: ನಲ್ಲತ್ತನ್ನಿ (ವಾರ್ಡ್ ನಂಬರ್ 16)ಯ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ತಂದೆ ದಿ. ದುರೈ ರಾಜ್. ಅವರು ಇಡುಕ್ಕಿ ಜಿಲ್ಲೆಯ ಮುನ್ನಾರ್ ಪಂಚಾಯತ್‌ನ ಕಾಂಗ್ರೆಸ್ ನಾಯಕರಾಗಿದ್ದರು.
ನಲ್ಲತ್ತನ್ನಿ ಕಲ್ಲಾರ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರಾಗಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೇಲಿನ ಅಭಿಮಾನ, ಗೌರವದಿಂದ ಅವರು ತಮ್ಮ ಮಗಳಿಗೆ ಸೋನಿಯಾ ಗಾಂಧಿ ಎಂದು ನಾಮಕರಣ ಮಾಡಿದ್ದರು.
ಸೋನಿಯಾ ಗಾಂಧಿ ಸುಭಾಷ್ ಜೊತೆ ವಿವಾಹವಾದರು. ಬಳಿಕ ಅವರು ಬಿಜೆಪಿಗೆ ಸೇರಿದರು. ಸುಭಾಷ್ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರು ಹಾಗೂ ಪ್ರಸ್ತುತ ಪಂಚಾಯತ್ ಪ್ರಧಾನ ಕಾರ್ಯದರ್ಶಿ.
ಪತಿ ಸುಭಾಷ್ ಅವರ ರಾಜಕೀಯ ನಿಲುವು ಮತ್ತು ಕುಟುಂಬದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ಪಂಚಾಯತ್ ಚುನಾವಣೆಯಲ್ಲಿ ಕಣಕ್ಕಿಳಿಯಲು ಟಿಕೆಟ್ ನೀಡಿದೆ. ನಲ್ಲತ್ತನ್ನಿ ವಾರ್ಡ್‌ನಲ್ಲಿ ಸೋನಿಯಾ ಗಾಂಧಿಗೆ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ರಮೇಶ್.
ಈಗಾಗಲೇ ಸೋನಿಯಾ ಗಾಂಧಿ ನಲ್ಲತ್ತನ್ನಿ ಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನು ಪತಿಯ ಜೊತೆಗೆ ನಡೆಸುತ್ತಿದ್ದಾರೆ. ಜನರಿಗೆ ಗೊಂದಲವಾಗಬಾರದು ಎಂದು ನನ್ನ ಹೆಸರು ಸೋನಿಯಾ ಗಾಂಧಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಂದು ಹೇಳುತ್ತಲೇ ಅವರು ಪ್ರಚಾರವನ್ನು ಮಾಡುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಪ್ರತಿನಿಧಿಸುವ ವಯನಾಡು ಕ್ಷೇತ್ರದಿಂದ ಈ ಪ್ರದೇಶ ಸುಮಾರು 200 ಕಿ.ಮೀ.ದೂರದಲ್ಲಿದೆ.

ಕೇರಳ ಪಂಚಾಯಿತಿ ಚುನಾವಣೆಗಳು ಡಿಸೆಂಬರ್ 9, 11ರಂದು ಎರಡು ಹಂತದಲ್ಲಿ ನಡೆಯಲಿದೆ. 941 ಪಂಚಾಯಿತಿಗಳನ್ನು ರಾಜ್ಯ ಒಳಗೊಂಡಿದೆ. ಇವುಗಳಲ್ಲಿ 152 ಬ್ಲಾಕ್ ಪಂಚಾಯಿತಿಗಳು, 14 ಜಿಲ್ಲಾ ಪಂಚಾಯಿತಿ, 87 ನಗರಸಭೆಗಳು ಮತ್ತು 6 ಮಹಾನಗರ ಪಾಲಿಕೆಗಳು.
ರಾಜ್ಯದ ಒಟ್ಟು 21,000 ವಾರ್ಡ್‌ಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 75,000 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಎಲ್‌ಡಿಎಫ್, ಯುಡಿಎಫ್ ಪಕ್ಷಗಳು ಚುನಾವಣೆಯಲ್ಲಿ ಎದುರಾಳಿಗಳು. ಮತ ಎಣಿಕೆ ಡಿಸೆಂಬರ್ 13ರಂದು ನಡೆಯಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


