ನವದೆಹಲಿ: ಇಂದು (ಫೆಬ್ರವರಿ 5) ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ 70 ಕ್ಷೇತ್ರಗಳಲ್ಲೂ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಪ್ರಚಾರದ ಸಮಯದಿಂದಲೂ ಪೊಲೀಸ್ ಇಲಾಖೆ ಬಿಜೆಪಿ ಪರ ಕೆಲಸ ಮಾಡುತ್ತಿದ್ದು ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಎಎಪಿ ಮತದಾನದ ದಿನವೂ ಸಹ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದೆ.
ಹೌದು, ಗ್ರೇಟರ್ ಕೈಲಾಶ್ ಕ್ಷೇತ್ರದ ಎಎಪಿ ಅಭ್ಯರ್ಥಿ ಸೌರಭ್ ಭಾರದ್ವಾಜ್ ದೆಹಲಿ ಪೊಲೀಸರು ಚಿರಾಗ್ ದೆಹಲಿಯ ಮತದಾರರನ್ನು ಮತ ಹಾಕದಂತೆ ತಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡುತ್ತಾ ಅಲ್ಲಿಯೇ ಇದ್ದ ಪೊಲೀಸರ ಬಳಿ ಹೋಗಿ ಇಲ್ಲಿ ಯಾಕೆ ಬ್ಯಾರಿಕೇಡ್ ಹಾಕಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಬ್ಯಾರಿಕೇಡ್ ಹಾಕಿ ಗ್ರಾಮಸ್ಥರನ್ನು ಹೆದರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ..
“ಚುನಾವಣೆಯ ಮೇಲೆ ಪ್ರಭಾವ ಬೀರಲು ಬೆಳಿಗ್ಗೆಯಿಂದ ಇಲ್ಲಿ ನಿಂತಿದ್ದೀರಿ. ಇಲ್ಲಿ ಬ್ಯಾರಿಕೇಡ್‌ಗಳನ್ನು ಯಾಕೆ ಹಾಕಿದ್ದೀರ? ದೆಹಲಿ ಪೊಲೀಸ್‌ನ ಯಾವ ಹಿರಿಯ ಅಧಿಕಾರಿ ಬ್ಯಾರಿಕೇಡ್‌ಗಳನ್ನು ಹಾಕುವಂತೆ ಹೇಳಿದ್ದಾರೆ? ಬಡ ಗ್ರಾಮಸ್ಥರಿಗೆ ತೊಂದರೆ ಕೊಡಲು ಇದೆಲ್ಲಾ ಮಾಡಲಾಗುತ್ತಿದೆ. ನಿನ್ನೆ ರಾತ್ರಿಯೂ ಎಸ್‌ಎಚ್‌ಒ ನಮ್ಮ ಖಾಸಗಿ ಆವರಣದ ಮೇಲೆ ದಾಳಿ ನಡೆಸಿದ್ದರು. ಇಲ್ಲಿ 21,000 ಜನರು ಮತದಾನ ಮಾಡಿದ್ದಾರೆ. ಚಿರಾಗ್ ದೆಹಲಿಯ ಎಲ್ಲಾ 17-18 ಮತಗಟ್ಟೆಗಳಲ್ಲಿ ಪೊಲೀಸರು ಇದೇ ರೀತಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


