ದುಬೈ: ನಿನ್ನೆ ( ಮಾರ್ಚ್ 4 ) ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್ ತಲುಪಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್ ಕಲೆಹಾಕಿ ಆಲ್‌ಔಟ್ ಆಗಿ ಭಾರತಕ್ಕೆ 265 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿತು.
ಹೀಗೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಸಮತೋಲನದ ಆಟವನ್ನಾಡಿದ ಭಾರತಕ್ಕೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ ವ್ಯಕ್ತವಾಗುತ್ತಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇಲ್ ಸ್ಟೈನ್ ಸಹ ಭಾರತದ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ.
ಇಂತಹ ಹಲವು ಕಠಿಣ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಡೇಲ್ ಸ್ಟೈನ್ ಇಂತಹ ಪಂದ್ಯಗಳಲ್ಲಿ ಬೌಲಿಂಗ್ ವಿಭಾಗ ಇಷ್ಟು ಅಚ್ಚುಕಟ್ಟಾಗಿ ಪ್ರದರ್ಶನ ನೀಡುವುದು ಎಷ್ಟು ಕಷ್ಟ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಬೌಲಿಂಗ್ ವಿಭಾಗ ಸರಿಯಾಗಿ ಕೆಲಸ ಮಾಡಬೇಕಾದರೆ ನಾಯಕ ಯಾವ ಸಮಯದಲ್ಲಿ ಯಾವ ಬೌಲರ್ ಬಳಸುತ್ತಾನೆ ಎಂಬುದೂ ಸಹ ಅತಿಮುಖ್ಯ.
ಇನ್ನು ಈ ಪಂದ್ಯದಲ್ಲಿ ನಾಯಕನಾಗಿ ರೋಹಿತ್ ಈ ವಿಷಯದಲ್ಲಿ ಗೆದ್ದಿದ್ದು, ಡೇಲ್ ಸ್ಟೈನ್ ರೋಹಿತ್ ಶರ್ಮಾ ಬೌಲಿಂಗ್ ವಿಭಾಗವನ್ನು ಬಳಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ಕಾಮೆಂಟರಿ ಹೇಳುತ್ತಿದ್ದ ಡೇಲ್ ಸ್ಟೈನ್ ‘ರೋಹಿತ್‌ಗೆ ಬುಮ್ರಾ ಬೇಕಿಲ್ಲ. ಯಾವುದೇ ಬೌಲರ್‌ನನ್ನು ಬೇಕಾದರೂ ಬುಮ್ರಾರನ್ನಾಗಿ ಮಾಡಬಲ್ಲರು’ ಎಂದು ಕೊಂಡಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


