ಬೆಂಗಳೂರು: ಬೇಸಿಗೆ ಬಂದಿದ್ದು ಸಾಮಾನ್ಯವಾಗಿ ವಿದ್ಯುತ್ ಕೊರತೆ ತಲೆದೋರಲಿದೆ. ಈ ಕುರಿತು ರಾಜ್ಯದ ರೈತರು ಚಿಂತಿಸುತ್ತಿರುವಾಗಲೇ ಇಂಧನ ಸಚಿವ ಕೆಜೆ ಜಾರ್ಜ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ಕೃಷಿ ಪಂಪ್ ಸೆಟ್ಗಳಿಗೆ ದಿನದ ಏಳು ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿಯ ಶಾಸಕ ಸಿದ್ದು ಸವದಿ, ವಿದ್ಯುತ್ ಕಡಿತದ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಂಪ್ ಸೆಟ್ಗಳಿಗೆ ಇಡೀ ರಾಜ್ಯದಲ್ಲಿ ಪವರ್ ಕಟ್ ಇಲ್ಲ. 7 ಗಂಟೆ ವಿದ್ಯುತ್ ನೀಡುತ್ತಿದ್ದೇವೆ. ದುರಸ್ತಿ ಸಂರ್ಭದಲ್ಲಿ ವಿದ್ಯುತ್ ಕಡಿತವಾಗಬಹುದು. ಇತ್ತೀಚೆಗೆ ಎಸ್ಕಾಂಗಳ ಸಭೆ ನಡೆಸಿದಾಗ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.
ದಿನದ 24 ಗಂಟೆ ವಿದ್ಯುತ್ ಪೂರೈಸುವ ನಿರಂತರ ಜ್ಯೋತಿ ಚಾಲ್ತಿಯಲ್ಲಿದೆ. ಕೃಷಿಗೆ ಏಳು ಗಂಟೆ ಪೂರೈಸುವ ವೇಳೆಯಲ್ಲಿ ನಿರಂತರ ಜ್ಯೋತಿಗೆ ಸಿಂಗಲ್ ಫೇಸ್ ನೀಡುವಂತೆ ಜನವರಿಯಲ್ಲೇ ಆದೇಶ ನೀಡಲಾಗಿದೆ. ಸಿಂಗಲ್ ಫೇಸ್ ಅನ್ನು ಬಲವಂತವಾಗಿ ತ್ರಿಫೇಸ್ ಮಾಡಿದರೆ ಒತ್ತಡ ಹೆಚ್ಚಾಗಿ ವಿದ್ಯುತ್ ಸಲಕರಣೆ ಸುಟ್ಟು ಹೋಗುತ್ತವೆ ಎಂದು ಎಚ್ಚರಿಸಿದರು.
ಪ್ರತಿಯೊಬ್ಬ ಎಕ್ಸಿಕ್ಯೂಟ್ ಇಂಜಿನಿಯರ್ಗಳು ಶಾಸಕರ ಜೊತೆ ಕಾಲಕಾಲಕ್ಕೆ ಚರ್ಚೆ ಮಾಡಿ ಸಮಸ್ಯೆ ತಿಳಿದುಕೊಂಡು, ಬಗೆಹರಿಸುವಂತೆ ಆದೇಶ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


