ಸಾಲು ಸಾಲು ಪ್ರತಿಭಟನೆಗಳು ನಡೆದರೂ ಪ್ರಯೋಜನವಾಗದೇ ದಿನದಿಂದ ದಿನಕ್ಕೆ ದನಿ ಕಳೆದುಕೊಳ್ಳುತ್ತಿದ್ದ ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದ ಯುಟ್ಯೂಬರ್ ಸಮೀರ್ ಪ್ರಕರಣದ ಕುರಿತು ಸಾಮಾನ್ಯ ಜನರಿಗಿದ್ದ ಅಭಿಪ್ರಾಯವನ್ನೇ ಬದಲಾಗುವಂತೆ ಮಾಡಿಬಿಟ್ಟಿದ್ದರು.
ಸೌಜನ್ಯ ಪ್ರಕರಣ ಮಾತ್ರವಲ್ಲದೇ ಅಲ್ಲಿ ನಡೆದ ಇನ್ನೂ ಅನೇಕ ನಿಗೂಢ ಕೊಲೆಗಳ ಬಗ್ಗೆ ದನಿ ಎತ್ತಿದ್ದ ಸಮೀರ್ ವಿಡಿಯೊಗಳು ದೊಡ್ಡ ಸಂಖ್ಯೆಯಲ್ಲಿ ಜನರಿಗೆ ತಲುಪಿದ್ದವು. ಕೆಲ ದಿನಗಳು ಕಳೆದ ಬಳಿಕ ಯುಟ್ಯೂಬ್‌ನಿಂದ ಆ ವಿಡಿಯೊಗಳು ತೆರವುಗೊಂಡವು. ಆದರೆ ಅಷ್ಟರಲ್ಲಾಗಲೇ ಕಾಂತಾರ, ಕೆಜಿಎಫ್ ಟ್ರೈಲರ್ ರೇಂಜಿಗೆ ವಿಡಿಯೊ ಎಲ್ಲೆಡೆ ಹಬ್ಬಿಬಿಟ್ಟಿತ್ತು.
ಹೀಗೆ ಎರಡು ವಿಡಿಯೊಗಳ ಮೂಲಕ ಪ್ರಕರಣವೊಂದನ್ನು ಮತ್ತೆ ಕೆದಕಿದ್ದ ಸಮೀರ್ ಇದೀಗ ಯುಟ್ಯೂಬ್ ಬಿಟ್ಟು ನೇರವಾಗಿ ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಹೋರಾಡಲು ಮುಂದಾಗಿದ್ದಾರೆ. ಈ ಬಗ್ಗೆ ವಿಡಿಯೊವೊಂದನ್ನು ಸಮೀರ್ ಹಾಗೂ ಗಿರೀಶ್ ಮಟ್ಟಣ್ಣವರ್ ಮಾಡಿದ್ದು, ನಾಳೆ ( ಏಪ್ರಿಲ್ 6 ) ಭಾನುವಾರದಂದು ಸೌಜನ್ಯ ಮೃತದೇಹ ಸಿಕ್ಕ ಸ್ಥಳವಾದ ಮಣ್ಣಸಂಕದಿಂದ ಬೆಳಗ್ಗೆ ಹತ್ತು ಗಂಟೆಗೆ ಹೊರಟು ಬೆಳ್ತಂಗಡಿ ತಾಲೂಕು ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸರ್ವರಿಗೂ ಆಮಂತ್ರಣ ನೀಡಿದ್ದರು.
ಆದರೆ ಇದೀಗ ಈ ಹೋರಾಟದ ಕುರಿತು ಮತ್ತೊಂದು ವಿಡಿಯೊ ಹಂಚಿಕೊಂಡಿರುವ ಸಮೀರ್ ನಾಳೆ ಆಯೋಜಿಸಲಾಗಿದ್ದ ಹೋರಾಟವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹೋರಾಟಕ್ಕೆ ಸ್ಟೇ ತಂದ ಕಾರಣ ಈ ನಿರ್ಧಾರವನ್ನು ಕೈಬಿಡಲಾಗುತ್ತಿದೆ ಎಂದಿದ್ದಾರೆ. ಇನ್ನು ವಿಡಿಯೊಗೆ ಸ್ಟೇ ತಂದ ರೀತಿಯೇ ಈ ಹೋರಾಟಕ್ಕೂ ಅಡ್ಡಿಪಡಿಸಲಾಗಿದೆ. ನ್ಯಾಯದ ಪರ ಹೋದರೆ ಹೀಗೆ ಎಂದು ಬೇಸರ ಹೊರಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


