ಕ್ರಿಕೆಟ್ ಜಗತ್ತಿನ ಕಿಂಗ್ ಎಂದೇ ಹೆಸರು ಮಾಡಿರುವ ಲೆಜೆಂಡರಿ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಇಂದು ( ನವೆಂಬರ್ 5 ) ಹುಟ್ಟುಹಬ್ಬದ ಸಂಭ್ರಮ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅತಿಕಡಿಮೆ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಕಲೆಹಾಕಿ ಅಸಾಧಾರಣ ಆಟಗಾರನಾಗಿ ನಿಂತಿರುವ ಕೊಹ್ಲಿಗೆ ಪೋಟಿಯೇ ಇಲ್ಲ. ಸದ್ಯ ಏಕದಿನ ಕ್ರಿಕೆಟ್ ಹೊರತುಪಡಿಸಿ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಕ್ರಿಯರಾಗಿದ್ದಾರೆ.
ಹೀಗೆ ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮಿಂಚಿ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹುಟ್ಟುಹಾಕಿ ಎಲ್ಲ ತಂಡದ ಆಟಗಾರರಲ್ಲೂ ಸಹ ವಿಶೇಷ ಗೌರವ ಮತ್ತು ಅಭಿಮಾನವನ್ನು ಸಂಪಾದಿಸಿರುವ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ತುಂಬಾ ದೊಡ್ಡ ಮಟ್ಟದಲ್ಲಿ ಶುಭಾಶಯಗಳು ಹರಿದುಬರುತ್ತಿವೆ.
ಐಪಿಎಲ್ ಆರಂಭವಾದಾಗಿನಿಂದ ತಾನು ಪ್ರತಿನಿಧಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದು, ಅತ್ತ ಐಪಿಎಲ್‌ನಲ್ಲಿ ಆರ್‌ಸಿಬಿಯ ಸಾಂಪ್ರದಾಯಿಕ ಎದುರಾಳಿ ಎಂದೇ ಕರೆಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಹ ಕೊಹ್ಲಿಗೆ ಶುಭ ಹಾರೈಸಿದೆ.
ಆದರೆ ಈ ಎರಡೂ ತಂಡಗಳು ಮಾಡಿರುವ ಪೋಸ್ಟ್‌ನಲ್ಲಿ ವ್ಯತ್ಯಾಸವಿದೆ. ಈ ಹಿಂದಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನ್ನಡ ಕಡೆಗಣನೆ ಮಾಡುತ್ತಿದೆ ಎಂಬ ಗಂಭೀರ ಆರೋಪವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡಿದ್ದ ಆರ್‌ಸಿಬಿ ಹೆಚ್ಚಾಗಿ ಕನ್ನಡದಲ್ಲೇ ಪೋಸ್ಟ್ ಹಂಚಿಕೊಳ್ಳುತ್ತಿತ್ತು. ಆದರೆ ಇಂದು ಕೊಹ್ಲಿ ಹುಟ್ಟುಹಬ್ಬಕ್ಕೆ ಹಿಂದಿಯ ಸಾಲುಗಳನ್ನು ಬಳಸಿ ವಿಡಿಯೊ ಎಡಿಟ್ ಮಾಡಿರುವ ಆರ್‌ಸಿಬಿ ಅದನ್ನು ಹಂಚಿಕೊಂಡಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಸಚಿನ್ ಬಳಿಕ ಆ ಸ್ಥಾನವನ್ನು ತುಂಬುವವರು ಕೊಹ್ಲಿ ಎಂಬ ರೀತಿ ತಮಿಳು ಚಿತ್ರದ ಡೈಲಾಗ್ ಬಳಸಿ ಎಡಿಟ್ ಮಾಡಿದೆ.
ಕೊಹ್ಲಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ, ಹಾಗಾಗಿ ಈ ರೀತಿ ಎಡಿಟ್ ಮಾಡಿರಬಹುದು ಎಂದು ವಹಿಸಿಕೊಳ್ಳುವವರೂ ಇರಬಹುದು. ಆದರೆ ಇತ್ತೀಚೆಗೆ ಇದೇ ಆರ್‌ಸಿಬಿ ವಿದೇಶಿ ಆಟಗಾರರ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭಕೋರಿದ ಉದಾಹರಣೆಗಳಿವೆ. ಹೀಗಿದ್ದಾಗ ಈ ದಿನ ಮಾತ್ರ ಏಕೆ ಹಿಂದಿ ವ್ಯಾಮೋಹ ಎಂಬ ಪ್ರಶ್ನೆ ಮೂಡದೇ ಇರದು. ಇನ್ನು ಇಂತಹ ಪ್ರಶ್ನೆ ಎತ್ತಬಾರದು ಎಂದೇ ʼಆರ್‌ಸಿಬಿ ಇನ್ ಕನ್ನಡʼ ಎಂಬ ಪ್ರತ್ಯೇಕ ಪೇಜ್‌ನಲ್ಲಿ ಕನ್ನಡದಲ್ಲಿ ಶುಭಾಶಯ ಕೋರಿದೆ ಆರ್‌ಸಿಬಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


