ಕಬ್ಬಿಗೆ ಯೋಗ್ಯ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ರೈತರ ಆಹೋರಾತ್ರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಿದ್ದು, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರೈತರ ಜೊತೆಯೇ ಹೋರಾಟ ಮಾಡುತ್ತಿದ್ದಾರೆ.
ಮಂಗಳವಾರ ಬೆಳಗ್ಗೆಯಿಂದ ರೈತರ ಜೊತೆ ಬಿ.ವೈ.ವಿಜಯೇಂದ್ರ ಹೋರಾಟದಲ್ಲಿ ತೊಡಗಿದ್ದಾರೆ. ನವೆಂಬರ್ 5ರ ಬುಧವಾರ ಅವರ ಹುಟ್ಟುಹಬ್ಬ. ಆದರೆ ಎಲ್ಲಾ ಕಾರ್ಯಕ್ರಮ ಬದಿಗೊತ್ತಿ ರೈತರ ಜೊತೆ ಅವರು ಅಹೋರಾತ್ರಿ ಹೋರಾಟಲ್ಲಿ ಭಾಗಿಯಾಗಿದ್ದಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರ ರೈತರು ಬೆವರ ಪರಿಶ್ರಮಕ್ಕೆ ತಕ್ಕ ಬೆಲೆಗಾಗಿ ನ್ಯಾಯದ ಸೆರಗೊಡ್ಡಿ ನಿಂತಿದ್ದಾರೆ. ಅವರೊಂದಿಗೆ ದನಿ ಗೂಡಿಸುವುದು ನನ್ನ ಪಾಲಿನ ಶ್ರೇಷ್ಠ ಕರ್ತವ್ಯ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿ ಸಿಹಿಯ ಬೆಲೆ ದೊರಕುವವರೆಗೂ ನಿದ್ರೆಗೆ ಜಾರುವ ಮಾತೇ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಅಮಿತ್ ಶಾ ಫೋನ್ ಕರೆ; ಬುಧವಾರ ಬೆಳಗ್ಗೆ ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿ.ವೈ.ವಿಜಯೇಂದ್ರಗೆ ಫೋನ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ ಅವರು, ರೈತ ಹೋರಾಟದ ಕುರಿತು ವಿಜಯೇಂದ್ರ ಅವರಿಂದ ಮಾಹಿತಿ ಪಡೆದರು. ಹೋರಾಟಕ್ಕೆ ಸದಾ ಬೆಂಬಲ ನೀಡಲಾಗುತ್ತದೆ ಎಂದು ಭರವಸೆ ಕೊಟ್ಟರು.
ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ. ಬುಧವಾರ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಮಂಗಳವಾರವೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ‘ಆತ್ಮೀಯ ಅಭಿಮಾನಿ-ಹಿತೈಷಿಗಳಲ್ಲಿ ವಿನಂತಿ..ಕಳೆದ ಆರು ದಿನಗಳಿಂದಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರ ರೈತರು ಗುರ್ಲಾಪುರ ಕ್ರಾಸ್ ಬಳಿ ನಡೆಸುತ್ತಿರುವ ಹೋರಾಟದಲ್ಲಿಂದು ಭಾಗವಹಿಸಿದ್ದೇನೆ. ಆದರೆ ಇಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು ಕಬ್ಬು ಬೆಳೆಗಾರರ ಬೇಡಿಕೆ ಅತ್ಯಂತ ನ್ಯಾಯೋಜಿತವಾಗಿದೆ. ಇವರ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಈ ಹೋರಾಟಕ್ಕೆ ಹೆಗಲುಕೊಟ್ಟು ನಿಲ್ಲಬೇಕಾಗಿರುವುದು ನನ್ನ ಕರ್ತವ್ಯವೆಂದು ಪರಿಭಾವಿಸಿ ನಾಳಿನ ನನ್ನ ಜನ್ಮದಿನಾಚರಣೆಯ ಸಂದರ್ಭದ ಸಡಗರವನ್ನು ಬದಿಗೊತ್ತಿ ರೈತರೊಂದಿಗೆ ಇದ್ದು, ಅವರ ಹೋರಾಟಕ್ಕೆ ದನಿಗೂಡಿಸುವವನಿದ್ದೇನೆ. ಈ ಕಾರಣಕ್ಕಾಗಿ ನಾನು ಬೆಂಗಳೂರಿನಲ್ಲಿ ಇರಲಾಗುತ್ತಿಲ್ಲ’ ಎಂದು ಹೇಳಿದ್ದರು.
‘ಪೂಜ್ಯ ತಂದೆ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ನಾಡಿನ ರೈತರು ಸಂಕಷ್ಟಕ್ಕೀಡಾದಾಗಲೆಲ್ಲ ದನಿ ಎತ್ತಿ ಹೋರಾಟ ನಡೆಸಿದ್ದಾರೆ, ರೈತರ ಹಕ್ಕುಗಳಿಗಾಗಿ ತಮ್ಮ ಸಾರ್ವಜನಿಕ ಬದುಕಿನ ಬಹು ಭಾಗವನ್ನು ಮೀಸಲಿಟ್ಟು ಹೋರಾಡಿದ್ದಾರೆ. ಅದೇ ಮಾರ್ಗದಲ್ಲಿ ಮುನ್ನಡೆಯುವ ಸಂಕಲ್ಪ ಹೊತ್ತ ನಾನು ರೈತರು ಸಂಕಷ್ಟದಲ್ಲಿರುವಾಗ ಅವರೊಂದಿಗೆ ಇರಬೇಕಾಗಿರುವುದು ನನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದೇನೆ. ಈ ಕಾರಣಕ್ಕಾಗಿ ನಾನು ಹೋರಾಟದ ಸ್ಥಳದಿಂದ ಬೆಂಗಳೂರಿಗೆ ಹಿಂದಿರುಗುವ ನಿರ್ಧಾರ ಕೈಬಿಟ್ಟಿದ್ದೇನೆ. ಆದ್ದರಿಂದ ನನ್ನ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ನನ್ನ ಈ ನಿಲುವನ್ನು ಬೆಂಬಲಿಸಿ ನಾಳೆ ತಾವು ಇದ್ದಲ್ಲಿಂದಲೇ ನನ್ನನ್ನು ಹಾರೈಸಬೇಕೆಂದು ಮನವಿ ಮಾಡುವೆ’ ಎಂದು ವಿಜಯೇಂದ್ರ ಪೋಸ್ಟ್ ಮೂಲಕ ಮನವಿ ಮಾಡಿದ್ದರು.
ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ರೈತರ ಆಹೋರಾತ್ರಿ ಹೋರಾಟಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೈತರು ಬೆಂಬಲ ಸೂಚಿಸಿದ್ದಾರೆ. ರಸ್ತೆ ತಡೆ ಚಳವಳಿ ನಡೆಸಿ ರಾಜ್ಯ ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ರೈತರ ಸಮಸ್ಯೆ ಆಲಿಸಲು ಮುಖ್ಯಮಂತ್ರಿಗಳು, ಸಚಿವರು ಆಗಮಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಬಿಜೆಪಿ ನಾಯಕರು ಸಹ ಹೋರಾಟಕ್ಕೆ ಬೆಂಬಲ ನೀಡಿರುವ ಕಾರಣ ಈ ಹೋರಾಟ ಇನ್ನಷ್ಟು ಕಾವು ಪಡೆದುಕೊಂಡಿದೆ.
ಸಚಿವರ ಆಗಮನ: ರೈತರ ಹೋರಾಟಕ್ಕೆ ಸರ್ಕಾರ ಮಣಿದಿದ್ದು ಇಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ರೈತ ಹೋರಾಟದ ಸ್ಥಳಕ್ಕೆ ಆಗಮಿಸಲಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಆಗಮಿಸುವ ಅವರು ರೈತರ ಅಹವಾಲು ಆಲಿಸಲಿದ್ದಾರೆ. ಸಚಿವರ ಆಗಮನದ ಹಿನ್ನಲೆಯಲ್ಲಿ ಹೋರಾಟ ನಡೆಯುತ್ತಿರುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರೈತರ ಬೇಡಿಕೆಗಳು
- ಕಬ್ಬು ಬೆಳೆದು ಅಗತ್ಯ ಬೆಲೆ ದೊರಕದೆ ಸಂಕಷ್ಟದಲ್ಲಿರುವ ರೈತರ ಬೇಡಿಕೆಗೆ ಸ್ಪಂದಿಸುವುದು
- ಕಾರ್ಖಾನೆಗಳು ರೈತರಿಗೆ ಪ್ರತಿ ಟನ್ ಕಬ್ಬಿಗೆ ರೂ.3050 ನೀಡಲು ಒಪ್ಪಿಕೊಂಡಿವೆ. ರೂ. 3,500 ರೂ. ನೀಡಬೇಕು
- ರೈತರ ಆಗ್ರಹದಂತೆ ಕಾರ್ಖಾನೆ ಮಾಲೀಕರನ್ನು ಕರೆತು ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು
- ಕಬ್ಬು ಬೆಳೆಗಾರ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು
- ಬಾಕಿ ಇರುವ ಬಿಲ್ ಪಾವತಿಸಿ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


