ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಮಂಗಳವಾರ ನಡೆದ ಉಪಹಾರಕೂಟದ ಬಳಿಕ ಬಿಜೆಪಿ ನಾಯಕರ ಕಣ್ಣು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಟ್ಟಿದ್ದ 24 ಲಕ್ಷ ರೂ.ಗಳ ಕಾರ್ಟಿಯರ್ ವಾಚ್ ಮೇಲೆ ಬಿದ್ದಿದೆ. ಆದರೆ ಬಿಜೆಪಿ ನಾಯಕರ ಟೈಂ ಸರಿ ಇಲ್ಲ ಎಂದು ಕಾಣುತ್ತದೆ. ಡಿ.ಕೆ.ಶಿವಕುಮಾರ್ ಸರಿಯಾಗಿಯೇ ತಿರುಗೇಟು ಕೊಡುತ್ತಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಡಿ.ಕೆ.ಶಿವಕುಮಾರ್ ವಾಚಿನ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಈಗ ಡಿ.ಕೆ.ಶಿವಕುಮಾರ್ ದಾಖಲೆಗಳ ಸಮೇತ ಅವುಗಳಿಗೆ ತಿರುಗೇಟು ನೀಡುತ್ತಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಡಿ.ಕೆ.ಶಿವಕುಮಾರ್ ಕಟ್ಟಿರುವ ವಾಚು ಕದ್ದಿರುವುದೇ? ಎಂದು ಕೇಳಿದ್ದರು. ಇದಕ್ಕೆ ಗುರುವಾರ ತಿರುಗೇಟು ಕೊಟ್ಟಿದ್ದ ಡಿ.ಕೆ.ಶಿವಕುಮಾರ್, “ನಾರಾಯಣಸ್ವಾಮಿ ಮನೆಯಿಂದಲೇ ವಾಚ್ ಕದ್ದಿದ್ದೇನೆ” ಎಂದು ಹೇಳಿದ್ದರು.
“ನನ್ನ ಬಳಿ ಇರುವ ದುಬಾರಿ ವಾಚ್‌ಗಳ ಬಗ್ಗೆ ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ಆ ವಾಚ್ ಖರೀದಿ ಬಗ್ಗೆ ನನಗೆ ಗೊತ್ತು. ಬಿಜೆಪಿ ಅವರಿಗೆ ಏನು ಗೊತ್ತು?” ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಶುಕ್ರವಾರ ಡಿ.ಕೆ.ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ‘ಮಿಸ್ಟರ್ ನಾರಾಯಣಸ್ವಾಮಿ..ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು’ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
‘ಇದು ನಿಮಗೆ ಘನತೆ ತರುವುದಿಲ್ಲ! ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..?” ಎಂದು ಪ್ರಶ್ನೆ ಮಾಡಿದ್ದಾರೆ.
“ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ..! ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ” ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಕಟ್ಟಿರುವ 24 ಲಕ್ಷ ರೂ.ಗಳ ಕಾರ್ಟಿಯರ್ ವಾಚ್ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿಯೂ ಕುತೂಹಲವಿದೆ. ಗುರುವಾರ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ವೇದಿಕೆ ಮೇಲೆ ಡಿ.ಕೆ.ಶಿವಕುಮಾರ್ ಕೈಯಲ್ಲಿ ಇದ್ದ ವಾಚ್ ಬಗ್ಗೆ ಚರ್ಚಿಸಿದರು.
ಆಗ ತಮ್ಮ ಕೈಯಲ್ಲಿ ಇದ್ದ ಕಾರ್ಟಿಯರ್ ವಾಚ್ ಅನ್ನು ಬಿಚ್ಚಿ ಸಚಿವ ಹೆಚ್.ಕೆ.ಪಾಟೀಲ್ ಕೈಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೊಟ್ಟು. ಆ ಬಗ್ಗೆ ವಿವರಣೆ ನೀಡಿದ್ದರು. ಆದರೆ ಬಿಜೆಪಿ ನಾಯಕರು ಈ ವಾಚ್ ಅನ್ನು ವಿವಾದ ಮಾಡಲು ಹೋಗಿ ಡಿ.ಕೆ.ಶಿವಕುಮಾರ್ ಕೈಯಲ್ಲಿ ತಿರುಗೇಟು ತಿಂದಿದ್ದಾರೆ.
ದಾಖಲೆ ಕೊಡಿ ಎಂದು ಸವಾಲು: ಛಲವಾದಿ ನಾರಾಯಣಸ್ವಾಮಿ, “ಕಾರ್ಟಿಯರ್ ಕಂಪನಿಯ ವಾಚ್ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿಲ್ಲ. ಈ ಬಗ್ಗೆ ದಾಖಲೆ ಕೊಡಿ” ಎಂದು ಸವಾಲು ಹಾಕಿದ್ದರು.
“ವಾಚಿನ ವಿಚಾರದಲ್ಲಿ ಕೇಳಿದಾಗ ಸುಳ್ಳು ಏಕೆ ಹೇಳುತ್ತೀರಿ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಒಂದೇ ಕಂಪನಿಯ ವಾಚ್ ಧರಿಸಿದ್ದಾರೆ. ಇದೊಂದು ಕಾಂಗ್ರೆಸ್ ಕಂಪನಿ ಇದ್ದಂತೆ” ಎಂದು ಟೀಕಿಸಿದ್ದರು.
“ಚುನಾವಣಾ ಅಫಿಡೆವಿಡ್‌ನಲ್ಲಿ ಅವರು ಒಂದು ರೋಲೆಕ್ಸ್ ವಾಚ್ 9 ಲಕ್ಷ ಎಂದಿದ್ದಾರೆ. ಹ್ಯೂಬ್ಲೆಟ್ ವಾಚ್ 23,90,246 ಎಂದಿದ್ದಾರೆ. ಆದರೆ, ಅವರ ಕೈಯಲ್ಲಿ ಕಾರ್ಟಿಯರ್ ಕಂಪನಿಯ ವಾಚ್ ಇದೆ. ಅದರ ಇಂದಿನ ದರ 43 ಲಕ್ಷ ಇದ್ದು, ತೆರಿಗೆ ಸೇರಿ 46-47 ಲಕ್ಷ ಆಗುತ್ತದೆ” ಎಂದು ಹೇಳಿದ್ದರು.
“ಒಂದೂವರೆ ವರ್ಷದ ಹಿಂದೆಯೇ ನಾನು ಡಿ.ಕೆ.ಶಿವಕುಮಾರ್ ಅವರ ವಾಚುಗಳ ಬಗ್ಗೆ ಹೇಳಿದ್ದೆ. ಆಗ 8 ವಾಚ್ ಇತ್ತು, ಈಗ 18 ರಿಂದ 19 ವಾಚ್‌ಗಳು ಇವೆ ಎಂಬ ಮಾಹಿತಿ ಲಭಿಸಿದೆ. ಎಲ್ಲಿ ಇವುಗಳ ಲೆಕ್ಕ ಕೊಟ್ಟಿದ್ದೀರಿ?” ಎಂದು ಪ್ರಶ್ನೆ ಮಾಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


