ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಮಾನದಿಂದ ರಕ್ಷಣೆ ಪಡೆಯಲು ಹಲವರು ಪಾನಕ, ಹಣ್ಣಿನ ರಸ, ಐಸ್ ಕ್ರೀಂ ಸೇರಿದಂತೆ ತಂಪಾದ ಪಾನೀಯಗಳು ಹಾಗೂ ಆಹಾರಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಪರಿಣಾಮವಾಗಿ, ರಸ್ತೆ ಬದಿಯಲ್ಲಿ ಲಭ್ಯವಿರುವ ಜ್ಯೂಸ್ ಹಾಗೂ ಐಸ್ ಕ್ರೀಂಗಳನ್ನು ಹೆಚ್ಚು ಮಂದಿ ಸೇವಿಸುತ್ತಾರೆ. ಆದರೆ ಇವುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ, ಮನೆಯಲ್ಲಿಯೇ ರುಚಿಕರವಾಗಿದ್ದು, ಆರೋಗ್ಯಕರವೂ ಆದ ಹಲವಾರು ಪಾನೀಯಗಳು, ಐಸ್ ಕ್ರೀಂ, ಫ್ರೂಟ್ ಸಲಾಡ್, ಕಸ್ಟರ್ಡ್ ಮುಂತಾದವನ್ನೇ ತಯಾರಿಸಿಕೊಳ್ಳುವುದು ಉತ್ತಮ.ಊಟದ ನಂತರ ಸಿಹಿಯಾದ ತಿನಿಸು ಸೇರಿಸಿಕೊಂಡರೆ ಅದು ಸಂಪೂರ್ಣ ಭೋಜನವಾಗಿದೆ ಎಂಬ ಅನುಭವ ನೀಡುತ್ತದೆ. ವಿಶೇಷವಾಗಿ ಫಿರ್ನಿಯಂತ ರುಚಿಕರವಾದ ಡೆಸರ್ಟ್‌ನ್ನು ಊಟದ ಬಳಿಕ ತಿಂದರೆ, ಅದರ ರುಚಿ ಹೇಳಲಾಗದು!ಕಾಶ್ಮೀರದಲ್ಲಿ ಬಹುಜನಪ್ರಿಯವಾಗಿರುವ ಈ ಸಿಹಿತಿಂಡಿ ಕೇಸರಿ ಬಾದಾಮಿ ಫಿರ್ನಿ, ಇದೀಗ ಮನೆಮಂದಿಯೂ ಸವಿಯಬಹುದಾದ ಸುಲಭ ಹಾಗೂ ರುಚಿಕರ ಡೆಸರ್ಟ್ ಆಗಿ ಪರಿಗಣಿಸಲಾಗಿದೆ.ಇಂದು ನಾವು ಮನೆಯಲ್ಲಿಯೇ ತಯಾರಿಸಬಹುದಾದ ಈ ಸಿಂಪಲ್ ಸ್ಟ್ರೀಟ್ ಸ್ಟೈಲ್ ಫಿರ್ನಿಯ ತಯಾರಿಸುವ ವಿಧಾನವನ್ನು ನೋಡೋಣ.
ಆವಶ್ಯಕ ಸಾಮಗ್ರಿಗಳು:
ಹಾಲು- 1 ಲೀಟರ್
ಗೋಡಂಬಿ- 25 ಗ್ರಾಂ
ಪಿಸ್ತಾ- 25 ಗ್ರಾಂ
ಏಲಕ್ಕಿ ಪುಡಿ – 1 ಚಮಚ
ಅಕ್ಕಿ ಹಿಟ್ಟು- 3 ಚಮಚ
ಬಾದಾಮಿ- 20 ಗ್ರಾಂ
ಕೇಸರಿ ದಳ- 10-12
ಸಕ್ಕರೆ – 1 ಬಟ್ಟಲು

ಬಾದಾಮಿ ಫಿರ್ನಿ ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ.ಮಧ್ಯಮ ಉರಿಯಲ್ಲಿ ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಕುದಿಸಿ.
ಸಕ್ಕರೆ ಕರಗಿದ ನಂತರ, ಅಕ್ಕಿಹಿಟ್ಟನ್ನು ನಿಧಾನವಾಗಿ ಹಾಲಿಗೆ ಹಾಕಿ, ಗಂಟು ಬೀಳದಂತೆ ನಿರಂತರವಾಗಿ ತಿರುಗಿಸುತ್ತಿರಬೇಕು.ಈ ಮಿಶ್ರಣ ಸ್ವಲ್ಪ ಹೊತ್ತಿನಲ್ಲಿ ಗಟ್ಟಿಯಾಗಲು ಆರಂಭಿಸುತ್ತದೆ.
ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಗಟ್ಟಿಯಾದ ಮಿಶ್ರಣಕ್ಕೆ ಸೇರಿಸಿ.
ಸ್ವಲ್ಪ ಬಿಸಿ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿ.ಇದನ್ನು ಕೂಡ ಫಿರ್ನಿ ಮಿಶ್ರಣಕ್ಕೆ ಸೇರಿಸಿ.
ಕೊನೆಗೆ ಎಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈ ಫಿರ್ನಿಯನ್ನು ಬಿಸಿಯಾಗಿರುವಾಗಲೇ ಸೇವಿಸಬಹುದು.ಅಥವಾ ಫ್ರಿಜ್‌ನಲ್ಲಿಟ್ಟು ತಣ್ಣಗಾಗಿಸಿದ ನಂತರ ಡಿಸರ್ಟ್ ಆಗಿ ಸವಿಯಬಹುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


