ಕಬ್ಬಿಗೆ ಯೋಗ್ಯ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ರೈತರ ಆಹೋರಾತ್ರಿ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ, ವಿವಿಧ ಕನ್ನಡ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುತ್ತೇವೆ ಎಂದು ರೈತರು ಘೋಷಣೆ ಮಾಡಿದ್ದಾರೆ.
ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರೂ ಸಹ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಜಾರಿದ್ದಾರೆ. ಕಾನೂನು ಸಚಿವ ಎಚ್.ಕೆ.ಪಾಟೀಲ್ ರೈತರ ಜೊತೆ ಬುಧವಾರ ನಡೆಸಿದ ಮಾತುಕತೆ ವಿಫಲವಾಗಿದೆ. ಬೆಂಗಳೂರಿಗೆ ಬರುವಂತೆ ಅವರು ನೀಡಿದ ಆಹ್ವಾನವನ್ನು ರೈತರು ತಿರಸ್ಕರಿಸಿದ್ದಾರೆ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೂರು ದಿನಗಳಿಂದ ರೈತರ ಜೊತೆ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿಸಿ ಎಂದು ರೈತರು ಬೇಡಿಕೆ ಇಟ್ಟಿದ್ದಾರೆ. ದೆಹಲಿಗೆ ನಿಯೋಗ ಹೋಗೋಣ, ಪ್ರಧಾನಿ ಭೇಟಿ ಸಾಧ್ಯವಾಗದಿದ್ದರೂ ಕೇಂದ್ರ ಸಚಿವರನ್ನು ಭೇಟಿ ಮಾಡಿಸುವ ಭರವಸೆಯನ್ನು ವಿಜಯೇಂದ್ರ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಬಳಿ ಆಹೋರಾತ್ರಿ ಹೋರಾಟದಲ್ಲಿ ತೊಡಗಿರುವ ರೈತರು ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲು ನವೆಂಬರ್ 6ರ ಗಡುವು ನೀಡಿದ್ದಾರೆ. ನವೆಂಬರ್ 7ರಿಂದ ರೈತರ ಹೋರಾಟ ತೀವ್ರವಾಗಲಿದೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳಾದ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಯಾವುದೇ ಶಾಸಕರು, ವಿಧಾನ ಪರಿಷತ್ ಸದಸ್ಯರು ಇಲ್ಲಿಯ ತನಕ ರೈತರು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿಲ್ಲ. ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತ್ರ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ರೈತರ ಜೊತೆ ಮಾತುಕತೆ ನಡೆಸಿದ್ದು, ಅದು ಸಹ ವಿಫಲವಾಗಿದೆ.
ಸಂಧಾನ ಸಭೆ ವಿಫಲ: ಆಹೋರಾತ್ರಿ ಹೋರಾಟವನ್ನು ಕೈಬಿಡಿ, ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿ ಎಂಬ ಸಚಿವ ಎಚ್.ಕೆ.ಪಾಟೀಲ್ ಮನವಿಯನ್ನು ರೈತರು ತಿರಸ್ಕಾರ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, “ಕಬ್ಬುದರ ನಿಗದಿ ಮಾಡುವ ಅಧಿಕಾರ ಇರುವುದು ರಾಜ್ಯ ಸರ್ಕಾರಕ್ಕೆ ಅಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ. ಮಹಾರಾಷ್ಟ್ರದಲ್ಲಿ ಬೆಲೆ ಜಾಸ್ತಿ ನೀಡುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ನೀಡಲಿ. ರೈತರ ಜೊತೆ ಮಾತುಕತೆ ನಡೆಸಲು ಸಚಿವರಿಗೆ ಸೂಚಿಸಿದ್ದೇನೆ” ಎಂದು ಹೇಳಿದ್ದಾರೆ.
ರೈತರ ಜೊತೆ ಸಭೆ ನಡೆಸಿದ ಎಚ್.ಕೆ.ಪಾಟೀಲ್, “ರೈತರ ಹೋರಾಟ ತೀವ್ರವಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಬಂದಿರುವೆ. ಸಮಸ್ಯೆ ಬಹಳ ಇದೆ, ನನ್ನೊಬ್ಬನಿಂದ ಪರಿಹಾರ ಮಾಡಲು ಸಾಧ್ಯವಿಲ್ಲ. ಬೆಂಗಳೂರಿಗೆ ನಿಯೋಗ ಬನ್ನಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸೋಣ” ಎಂದು ಹೇಳಿದರು.
“ಗುರುವಾರ ಸಂಜೆಯೊಳಗೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಕಾರ್ಖನೆ ಮಾಲೀಕರ ಜೊತೆ ಸಭೆ ಮಾಡಿ, ನಿಮಗೆ ತೀರ್ಮಾನ ತಿಳಿಸುತ್ತೇವೆ. ಎರಡು ದಿನಗಳ ಕಾಲಾವಕಾಶ ನೀಡಿ, ಬೆಂಗಳೂರಿಗೆ ನಿಯೋಗ ಬನ್ನಿ” ಎಂದು ಸಚಿವರು ಆಹ್ವಾನ ನೀಡಿದರು.
ಸಚಿವರ ಸಭೆ ಬಳಿಕ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, “ರೈತರಿಗೆ ಕಾರ್ಖನೆ ಮಾಲೀಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ವಿವರಿಸಿದ್ದೇವೆ. ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 1000 ರೂ. ಕೊಡಬೇಕು ಎಂದು ಸಚಿವರ ಗಮನ ಸೆಳೆಯಲಾಗಿದೆ” ಎಂದರು.
ಸಚಿವರ ಯಾವ ಭರವಸೆಗೂ ರೈತರು ಒಪ್ಪಿಗೆ ಕೊಟ್ಟಿಲ್ಲ. ಅಂತಿಮವಾಗಿ ರೈತರು ನವೆಂಬರ್ 6ರ ರಾತ್ರಿ 8 ಗಂಟೆಯ ತನಕ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ ನವೆಂಬರ್ 7ರಿಂದ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


