ಬಿಜೆಪಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಅಕ್ರಮವಾಗಿ ಮತಗಳನ್ನು ಚಲಾಯಿಸಿದೆ ಎಂದು ʼವೋಟ್ ಚೋರ್ʼ ಅಭಿಯಾನ ಮಾಡುತ್ತಿರುವ ರಾಹುಲ್ ಗಾಂಧಿ ಸಾಕ್ಷಿ ಸಮೇತ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಆದರೆ ಚುನಾವಣಾ ಆಯೋಗ ಮಾತ್ರ ರಾಹುಲ್ ಗಾಂಧಿ ಆರೋಪವನ್ನು ನಿರಾಕರಿಸಿದ್ದು ಯಾವುದೇ ಮತಗಳ್ಳತನ ನಡೆದಿಲ್ಲ ಎಂದಿತ್ತು. ನಿನ್ನೆ ( ನವೆಂಬರ್ 5 ) ಸಹ ರಾಹುಲ್ ಗಾಂಧಿ ಪತ್ರಿಕಾಗೋಷ್ಟಿಯನ್ನು ನಡೆಸಿ ಹರಿಯಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.
ಬ್ರೆಜಿಲ್‌ನ ಮಾಡೆಲ್ ಒಬ್ಬರ ಫೋಟೊವನ್ನು ಬಳಕೆ ಮಾಡಿ 25 ಕಡೆ ಮತ ಚಲಾಯಿಸಲಾಗಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಆಕೆಯ ಫೋಟೊವನ್ನೂ ಸಹ ಹಂಚಿಕೊಂಡಿದ್ದರು. ಆದರೆ ಈ ಆರೋಪವನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ನಕಲಿ ಫೋಟೊ ಎಂದಿದ್ದರು.
ಆದರೆ ಇದೀಗ ಸ್ವತಃ ಆ ಮಾಡೆಲ್ ರಾಹುಲ್ ಗಾಂಧಿ ಮಾಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಲರಿಸ್ಸಾ ಎಂಬ ಮಾಡೆಲ್ ಈ ಕುರಿತು ವಿಡಿಯೊ ಮಾಡಿದ್ದು, ಪೋರ್ಚುಗಲ್ ಭಾಷೆಯಲ್ಲಿ ಮಾತನಾಡಿದ್ದಾರೆ. ʼಸ್ನೇಹಿತರೇ ನಿಮಗೆ ನಾನೊಂದು ಜೋಕ್ ಹೇಳುತ್ತೇನೆ. ಅದು ಅತಿ ಭಯಂಕರವಾಗಿದೆ. ನನ್ನ ಹಳೆಯ ಫೋಟೊವನ್ನು ಭಾರತದಲ್ಲಿ ಮತ ಚಲಾಯಿಸಲು ಬಳಸುತ್ತಿದ್ದಾರೆ. ನನ್ನನ್ನು ಭಾರತೀಯಳೆಂದು ಬಿಂಬಿಸಿದ್ದಾರೆ. ನನ್ನ ಫೋಟೊ ಇಟ್ಟುಕೊಂಡು ಕಿತ್ತಾಡುತ್ತಿದ್ದಾರೆ. ನೋಡಿ ಎಂತಹ ಹುಚ್ಚುತನ, ಎಂತಹ ಗೊಂದಲದಲ್ಲಿ ನಾನು ಬದುಕುತ್ತಿದ್ದೇನೆ. ಓರ್ವ ಪತ್ರಕರ್ತ ನನ್ನ ಕಚೇರಿಗೆ ಕರೆ ಮಾಡಿ ನನ್ನ ಜತೆ ಮಾತನಾಡಲು ಯತ್ನಿಸಿದ್ದಾರೆ. ಇದಕ್ಕೆ ನಾನು ಪ್ರತಿಕ್ರಿಯಿಸದೇ ಕಚೇರಿಯವರಿಗೆ ನನ್ನ ಮೊಬೈಲ್ ನಂಬರ್ ಕೊಡಬೇಡಿ ಎಂದೆ. ಆದರೂ ಬಿಡದ ಆತ ನನ್ನ ಇನ್ಸ್ಟಾಗ್ರಾಮ್ ಪತ್ತೆ ಹಚ್ಚಿ ಅಲ್ಲಿ ಕರೆ ಮಾಡಿದ್ದಾರೆ. ಬೇರೆ ನಗರದ ನನ್ನ ಸ್ನೇಹಿತನೋರ್ವ ನನಗೆ ಆ ಫೋಟೊವನ್ನು ಕಳುಹಿಸಿದ್ದಾನೆ ನೋಡಿʼ ಎಂದು ಹೇಳಿ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಹೇಳಿದ ಹಾಗೆ ಆ ಫೋಟೊ ತನ್ನದೇ ಎಂದು ಬ್ರೆಜಿಲ್ ಮಾಡೆಲ್ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


