ಬೆಂಗಳೂರು- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದಲ್ಲಿ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಸುಮಾರು 4921 ನಿವೇಶನಗಳಲ್ಲಿ ಅಕ್ರಮ ಎಸಗಿ 2,800 ಕೋಟಿ ರೂ. ಹಗರಣ ನಡೆದಿರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆಹಚ್ಚಿದೆ.
ಈ ಹಿಂದೆ ಲೋಕಾಯುಕ್ತ ತನಿಖಾ ಸಂಸ್ಥೆಗೆ ಇಡಿ ಬರೆದ ಪತ್ರದಲ್ಲಿ 1091 ನಿವೇಶನಗಳ ಅಕ್ರಮ ಎಸಗಿ 700 ಕೋಟಿ ಹಗರಣ ನಡೆದಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದರು.
ಕೆಲವು ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸೇರಿ ಮುಡಾದಲ್ಲಿ ಒಟ್ಟು 2800 ಕೋಟಿ ಅಕ್ರಮ ವೆಸಗಿದ್ದಾರೆ. ಕೇವಲ 50:50 ಅನುಪಾತವಷ್ಟೇಲ್ಲದೆ 60:40 ಅನುಪಾತದಲ್ಲೂ ವಂಚನೆ ಮಾಡಲಾಗಿದೆ. ಲೇಔಟ್‍ಗಳನ್ನೇ ನಿರ್ಮಿಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನಗಳನ್ನು ಭೂ ಸ್ವಾಧೀನ ಮಾಡಿಕೊಂಡು ಭೂ ಪರಿವರ್ತನೆ ಮಾಡದ ಲೇಔಟ್‍ಗಳಲ್ಲೂ ಅಕ್ರಮ ಮಾಡಿರುವುದನ್ನು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಕಾನೂನು ನಿಯಮಗಳ ಉಲ್ಲಂಘನೆ, ಕರ್ತವ್ಯ ಲೋಪ, ನಕಲಿ ದಾಖಲೆ ತಿದ್ದುಪಡಿ, ಸಾಕ್ಷ್ಯನಾಶ, ರಾಜಕೀಯ ಪ್ರಭಾವವೂ ಇದರಲ್ಲಿ ಸಾಕಷ್ಟು ಕಂಡುಬಂದಿದೆ. ಕ್ರಯ ಪತ್ರ ಮುನ್ನವೇ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದೆ.
ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಯತೀಂದ್ರ, ಮುಡಾ ಅಧ್ಯಕ್ಷರಾಗಿದ್ದ ಮರಿಗೌಡ, ಪಿ.ರಾಜೀವ್, ಇಬ್ಬರು ಮಾಜಿ ಆಯುಕ್ತರು ಪ್ರಭಾವ ಬೀರಿ ಹಂಚಿಕೆ ಮಾಡಿರುವುದನ್ನು ಸಹ ಇಡಿ ಪತ್ತೆ ಮಾಡಿದೆ.
ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿದ್ದ ಎಸ್.ಜಿ. ದಿನೇಶ್‍ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಮುಡಾದಲ್ಲಿ ಪ್ರಭಾವಿಯಾಗಿದ್ದರು. ಸಿಎಂ ಜತೆಗಿನ ಪ್ರಭಾವ ಬಳಸಿಕೊಂಡು ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ಮಾಡಿಸಿದ್ದು, ಕೆಲವು ಸಹಿಗಳನ್ನು ನಕಲು ಮಾಡಿದ್ದಾರೆ.
ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಕೂಡ ಪಾರ್ವತಿ ಅವರ ಬದಲಿ ನಿವೇಶನ ಹಂಚಿಕೆ ಕಡತವನ್ನು ಸಂಬಂಧಪಟ್ಟ ವಿಭಾಗಕ್ಕೆ ವರ್ಗಾಯಿಸದೇ ತಾವೇ ನಿರ್ವಹಣೆ ಮಾಡಿದ್ದಾರೆ. ಅಧಿಕಾರಿಗಳ ಈ ನಡೆ ಪಾರ್ವತಿ ಅವರಿಗೆ ಉದ್ದೇಶಪೂರ್ವಕವಾಗಿ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಜಯರಾಮು ಅವರು ಮುಡಾದಿಂದ ಪಡೆದ ನಿವೇಶನಗಳಲ್ಲಿ ಒಂದು ನಿವೇಶನವನ್ನು ಮುಡಾ ಮಾಜಿ ಅಧ್ಯಕ್ಷ ಕೆ.ಮರಿಗೌಡ ತಮ್ಮ ಪತ್ನಿ ಎಸ್.ಎ. ಜಯಶ್ರೀ ಹೆಸರಿನಲ್ಲಿ ಪಡೆದಿದ್ದಾರೆ. ಈ ವಿಚಾರವನ್ನು ಜಯರಾಮು ಒಪ್ಪಿಕೊಂಡಿದ್ದಾಗಿ ಇ.ಡಿ ತಿಳಿಸಿದೆ.
ಚಾಮುಂಡಿ ನಗರ ಸರ್ವೋದಯ ಸಂಘದ ಸದಸ್ಯರು 17 ಎಕರೆ ಪ್ರದೇಶದಲ್ಲಿನ 48 ನಿವೇಶನಗಳು ನಮ್ಮದು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮುಡಾ ಅಧಿಕಾರಿಗಳು ಈ 17 ಎಕರೆ ಪ್ರದೇಶಗಳನ್ನು ರೈತರಿಂದ ನೇರವಾಗಿ ನಾವು ಖರೀದಿಸಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕೊನೆಗೆ ನ್ಯಾಯಾಲಯ ಮಾನವೀಯ ದೃಷ್ಟಿಯಿಂದ ಸಂಘದ ಸದಸ್ಯರನ್ನು ಪರಿಗಣಿಸಿ, ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಎಂದು ಮೂಡಾಗೆ ಸೂಚನೆ ನೀಡಿತ್ತು.ಅಧಿಕಾರಿಗಳು ಚಾಮುಂಡಿ ನಗರ ಸರ್ವೋದಯ ಸಂಘದ ಸದಸ್ಯರಿಗೆ ನಿವೇಶನ ನೀಡಲು ನಿರ್ಧರಿಸುತ್ತದೆ. ಅದರಂತೆ ಮುಡಾ ಸಂಘದ ಸದಸ್ಯರ ಹೆಸರಿಗೆ ನಿವೇಶನಗಳ ಕ್ರಯ ಪತ್ರ ಮಾಡಿಕೊಡುತ್ತದೆ. ಆದರೆ, ಸಂಘದ ಸದಸ್ಯರು ಕ್ರಯ ಪತ್ರ ಆಗುವ ಒಂದು ತಿಂಗಳು ಮುನ್ನವೇ ಇನ್ನೊಬ್ಬರಿಗೆ ಸೇಲ್ ಅಗ್ರಿಮೆಂಟ್ ಕೊಟ್ಟಿದ್ದಾರೆ.
ಸೂರ್ಯಕುಮಾರಿ ಎಂಬುವರ ಹೆಸರಿಗೆ 2023ರ ನವೆಂಬರ್ 29 ರಂದು ಕ್ರಯ ಪತ್ರ ಮಾಡಿಕೊಡಲಾಗುತ್ತದೆ. ಮುಡಾ ನಿವೇಶನ ಸಂಖ್ಯೆ 42ನ್ನು ಕ್ರಯ ಮಾಡಿಕೊಟ್ಟಿದೆ. ಆದರೆ, ಸೂರ್ಯಕುಮಾರಿ ಕ್ರಯ ಪತ್ರ ಆಗುವ ಮುನ್ನವೇ ಅಂದರೆ 2023ರ ಅಕ್ಟೋಬರ್ 13 ರಂದು ನಿವೇಶನವನ್ನು ವಿನೋದ್ ಕುಮಾರ್ ಎಂಬುವರಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.
ನಾಲ್ಕು ನಿವೇಶನಗಳ ಸೇಲ್ ಅಗ್ರಿಮೆಂಟ್ ಪಡೆದ ಮಂಜುನಾಥ್ ಅಲಿಯಾಸ್ ಕಾರ್ತಿಕ ಬಡಾವಣೆ ಮಂಜುನಾಥ್ 50:50 ಅನುಪಾತದ ಮುಡಾ ಕೇಸ್‍ನಲ್ಲಿ ಇಡಿ ತನಿಖೆ ಎದುರಿಸುತ್ತಿದ್ದಾರೆ. ಹೀಗೆ ತಮ್ಮ ಹೆಸರಿಗೆ ಕ್ರಯ, ಖಾತೆ ಆಗದೆ ಸಂಘದ ಸದಸ್ಯರು ಇನ್ನೊಬ್ಬರಿಗೆ ಭೂಮಿ ಮಾರಿದರಾ ಎಂಬ ಅನುಮಾನ ವ್ಯಕ್ತವಾಗಿದೆ. ಆಥವಾ ಭೂಮಿ ಕಬಳಿಸುವ ಸಂಚಿನಿಂದಲೇ ಸೇಲ್ ಅಗ್ರಿಮೆಂಟ್ ಮಾಡಿಕೊಂಡರಾ ಭೂಗಳ್ಳರು ಎಂಬ ಅನುಮಾನ ವ್ಯಕ್ತವಾಗಿದೆ.
1905 ನಿವೇಶನ ಹಂಚಿಕೆ ಗೋಲ್‍ಮಾಲ್: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ನಿವೇಶನ ಹಂಚಿಕೆ ಹಾಗೂ ಪರಿಹಾರ) ನಿಯಮಾವಳಿ 2009 ಹಾಗೂ 2015 ಅನ್ನು ಮುಡಾ ಉಲ್ಲಂಸಿದ್ದು, 1095 ನಿವೇಶನಗಳ ಹಂಚಿಕೆಯಲ್ಲಿ ಭಾರೀ ಪ್ರಮಾಣದ ನಿಯಮ ಉಲ್ಲಂಘನೆಯಾಗಿದೆ. ಸರಕಾರಿ ಮಾರ್ಗಸೂಚಿ ದರ 400 ಕೋಟಿ ರೂ. ಮೌಲ್ಯದ 1095 ನಿವೇಶನಗಳನ್ನು ಬಹುತೇಕ ಭೂಮಿ ಕಳೆದುಕೊಂಡವರಿಗಿಂತ ಬೇನಾಮಿದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿಗಳಿಗೆ ಹಂಚಿಕೆ ಮಾಡಲಾಗಿದೆ.
50:50 ಅನುಪಾತದಲ್ಲಿ ನಿವೇಶನ ಹಂಚಿಕೆಯನ್ನು 2023ರ ಅಕ್ಟೋಬರ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ, 2024ರ ಮಾರ್ಚ್‍ನಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ 252 ನಿವೇಶನ ಹಂಚಲಾಗಿದೆ. ಈ ಅಕ್ರಮ ಮುಡಾದ ಅಂದಿನ ಅಧ್ಯಕ್ಷ ಕೆ.ಮರಿಗೌಡ ಹಾಗೂ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ಮೌಖಿಕ ಸೂಚನೆ ಮೇರೆಗೆ ನಡೆದಿದೆ ಎಂದು ಇ.ಡಿ ತಿಳಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


