ಸದ್ಯ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡ ಪ್ರತಿಷ್ಟಿತ ಆಶಸ್ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದೆ. ಐದು ಪಂದ್ಯಗಳ ಸರಣಿ ಇದಾಗಿದ್ದು, ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ ಎರಡೇ ದಿನಕ್ಕೆ ಇಂಗ್ಲೆಂಡ್‌ಗೆ ಸೋಲುಣಿಸಿ ಶುಭಾರಂಭ ಮಾಡಿತ್ತು.
ಸದ್ಯ ಬ್ರಿಸ್ಬೇನ್‌ನ ಗಬ್ಬಾ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 334 ರನ್‌ಗಳಿಗೆ ಆಲ್‌ಔಟ್ ಆಗಿದೆ. ಇನ್ನು ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದ್ದು, ಜಾಕ್ ಕ್ರಾವ್ಲಿ ಹಾಗೂ ಜೋ ರೂಟ್ ಹೊರತುಪಡಿಸಿ ಉಳಿದೆಲ್ಲರೂ ನೆಲಕಚ್ಚಿದ್ದಾರೆ.
ಕ್ರಾವ್ಲಿ 76 ರನ್ ಗಳಿಸಿದರೆ, ಜೋ ರೂಟ್ ಅಜೇಯ 138 ರನ್ ಬಾರಿಸಿದ್ದಾರೆ. ಈ ಮೂಲಕ ಜೋ ರೂಟ್ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ 16 ಟೆಸ್ಟ್ ಪಂದ್ಯಗಳು, 30 ಇನ್ನಿಂಗ್ಸ್‌ಗಳು ಹಾಗೂ 4 ಆಶಸ್ ಸರಣಿಗಳನ್ನಾಡಿದ್ದರೂ ಶತಕ ಬಾರಿಸದಿದ್ದ ರೂಟ್ ಇದೀಗ ಶತಕ ಬಾರಿಸಿದ್ದಾರೆ. 10 ಬಾರಿ ಆಸ್ಟ್ರೇಲಿಯಾದಲ್ಲಿ ಅರ್ಧಶತಕ ಬಾರಿಸಿದ್ದ ರೂಟ್ ಶತಕ ಬಾರಿಸಲು ಸಾಧ್ಯವಾಗದಿದ್ದ ಕಾರಣ ಅವರನ್ನು ಆಸ್ಟ್ರೇಲಿಯಾ ಮಾಧ್ಯಮಗಳು ಟೀಕಿಸಿದ್ದವು.
ಹೀಗಾಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ‘ಈ ಸರಣಿಯಲ್ಲಿ ಜೋ ರೂಟ್ ಶತಕ ಬಾರಿಸದೇ ಇದ್ದರೆ ಐತಿಹಾಸಿಕ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಬಟ್ಟೆ ಬಿಚ್ಚಿ ಬೆತ್ತಲೆಯಾಗಿ ಓಡಾಡುತ್ತೇನೆ’ ಎಂದು ಹೇಳಿಕೆ ನೀಡಿದ್ದರು.
ಜೋ ರೂಟ್ ಶತಕ ಬಾರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮ್ಯಾಥ್ಯೂ ಹೇಡನ್ ಹೇಳಿಕೆ ವೈರಲ್ ಆಗಿದ್ದು, ಟ್ರೋಲ್‌ಗಳು ನಡೆದಿವೆ. ಇನ್ನು ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸ್ ಹೇಡನ್ ಸಹ ಈ ಬಗ್ಗೆ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಂಚಿಕೊಂಡಿದ್ದು, ‘ರೂಟ್ ಧನ್ಯವಾದಗಳು. ನೀವು ನಮ್ಮೆಲ್ಲರ ಕಣ್ಣುಗಳನ್ನು ಉಳಿಸಿದ್ದೀರ’ ಎಂದು ಬರೆದುಕೊಂಡಿದ್ದಾರೆ. ಸ್ವತಃ ಮಗಳೇ ಹೇಡನ್ ರೂಟ್ ಶತಕ ಬಾರಿಸದೇ ಇದ್ದರೆ ಕಣ್ಣು ಹೋಗುತ್ತಿತ್ತು ಎಂದು ಕಾಲೆಳೆದು ಹಂಚಿಕೊಂಡ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಜೋ ರೂಟ್ ವೃತ್ತಿ ಬದುಕಿನ 40ನೇ ಅಂತಾರಾಷ್ಟ್ರೀಯ ಟೆಸ್ಟ್ ಶತಕ ಇದಾಗಿದ್ದು, ಟೆಸ್ಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 41 ಶತಕ ಬಾರಿಸಿರುವ ರಿಕಿ ಪಾಂಟಿಂಗ್ ಮೂರನೇ ಸ್ಥಾನ, 45 ಶತಕ ಬಾರಿಸಿರುವ ಜಾಕ್ಸ್ ಕಾಲೀಸ್ ಎರಡನೇ ಸ್ಥಾನ ಹಾಗೂ 51 ಶತಕಗಳನ್ನು ಬಾರಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.
ಶಿವಮೊಗ್ಗ: ಒಂದೇ ಮನೆಯಲ್ಲಿ ತಾಯಿ, ಮಗ ನೇಣಿಗೆ ಶರಣು; ಈ ಹಿಂದೆ ಮಾವ, ಸೊಸೆಯೂ ಇದೇ ಮನೆಯಲ್ಲಿ ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


