ಧಾರವಾಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಸಜೀವವಾಗಿ ದಹನವಾಗಿದ್ದಾರೆ. ಕುಟುಂಬದವರನ್ನು ಭೇಟಿ ಮಾಡಲು ಐ-20 ಕಾರಿನಲ್ಲಿ ಸಾಗುವಾಗ ಈ ಅಪಘಾತವಾಗಿದೆ.
ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದ ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಸುಟ್ಟು ಕರಕಲಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಧಾರವಾಡ ಜಿಲ್ಲೆಯ ಅಣ್ಣೀಗೇರಿ ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಗದಗದಲ್ಲಿರುವ ಕುಟುಂಬದವರನ್ನು ಭೇಟಿ ಮಾಡಲು ಪಂಚಾಕ್ಷರಿ ಸಾಲಿಮಠ ಹುಬ್ಬಳ್ಳಿಯಿಂದ ಕಾರಿನಲ್ಲಿ ಹೊರಟಿದ್ದರು.
ಕಾರು ಡಿವೈಡರ್‌ಗೆ ಗುದ್ದಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಡೋರ್ ಲಾಕ್ ತೆಗೆದು ಹೊರಬಾರಲಾರದೇ ಪಂಚಾಕ್ಷರಿ ಸಾಲಿಮಠ ಕಾರಿನಲ್ಲಿಯೇ ಸಜೀವವಾಗಿ ದಹನವಾಗಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದು ನೋಡಿದ ಸ್ಥಳೀಯರು ತಕ್ಷಣ ಅಣ್ಣೀಗೇರಿ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಸ್ವಂತ ಕಾರಿನಲ್ಲಿ ತಾವೇ ಡ್ರೈವ್ ಮಾಡಿಕೊಂಡು ಪಂಚಾಕ್ಷರಿ ಸಾಲಿಮಠ ಕುಟುಂಬದವರನ್ನು ನೋಡಲು ಹೋಗುತ್ತಿದ್ದರು. ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಇಂಧನ ಟ್ಯಾಂಕ್‌ಗೆ ಹಾನಿಯಾಗಿದ್ದು, ತಕ್ಷಣ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾರು ಬೆಂಕಿಗೆ ಆಹುತಿಯಾಗಿದ್ದು, ಅಧಿಕಾರಿ ಜೀವಂತವಾಗಿ ಸುಟ್ಟುಹೋಗಿದ್ದಾರೆ ಎಂದು ಎಸ್‌ಪಿ ಗುಂಜನ್ ಆರ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಣ್ಣೀಗೇರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ನವೆಂಬರ್ 25ರಂದು ಕಲಬುರಗಿ ಬಳಿಯ ಜೇವರ್ಗಿ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಗಾಯಗೊಂಡಿದ್ದರು. ಕಲಬುರಗಿಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಘಟನೆ ನೆನಪು ಮಾಸುವ ಮುನ್ನವೇ ಲೋಕಾಯುಕ್ತ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹಲವಾರು ಗಣ್ಯರ ಸಂತಾಪ: ಪಂಚಾಕ್ಷರಿ ಸಾಲಿಮಠ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪವನ್ನು ಸೂಚಿಸಿದ್ದಾರೆ. ‘ಮುರಗೋಡ್ ಗ್ರಾಮದ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ್ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದು, ಮನಸ್ಸಿಗೆ ನೋವಾಯಿತು’ ಎಂದು ಹೇಳಿದ್ದಾರೆ.
‘ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದ್ದು ಪೋಲಿಸ್ ಇಲಾಖೆಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ. ಪಂಚಾಕ್ಷರಿ ಅವರು ಈ ಹಿಂದೆ ಬೈಲಹೊಂಗಲ, ಗದಗ ಹಾಗೂ ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ಪೋಸ್ಟ್ ಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


