ಈ ಬಾರಿಯ ಬಿಗ್‌ಬಾಸ್ ಕನ್ನಡದಲ್ಲಿ ಅತಿಹೆಚ್ಚು ಸದ್ದು ಮಾಡಿದ ಜೋಡಿ ಎಂದರೆ ಅದು ಕಾವ್ಯ ಹಾಗೂ ಗಿಲ್ಲಿ. ಪ್ರೀತಿ, ಪ್ರೇಮದ ಗೋಜಿಗೆ ಹೋಗದ ಈ ಜೋಡಿ ಸ್ನೇಹಿತರಾಗಿಯೇ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಗಿಲ್ಲಿ ಕಾವ್ಯ ಕುರಿತು ಆಡುವ ಮಾತುಗಳು ಹಾಗೂ ಮಾಡುವ ತಮಾಷೆ ವೀಕ್ಷಕರಿಗೆ ಅಚ್ಚುಮೆಚ್ಚು. ಇಂತಹ ಪ್ರಸಂಗಗಳಿಂದಲೇ ಈ ಇಬ್ಬರಿಗೂ ಕಾರ್ಯಕ್ರಮದಲ್ಲಿ ಒಳ್ಳೆಯ ಮೈಲೇಜ್ ಸಿಕ್ಕಿತು ಎಂದರೆ ಬಹುಶಃ ತಪ್ಪಲ್ಲ.
ಕಿಚ್ಚ ಸುದೀಪ್ ಸಹ ಇಬ್ಬರನ್ನು ಉಲ್ಲೇಖಿಸಿ ಅನೇಕ ಬಾರಿ ತಮಾಷೆ ಮಾಡಿದ ಉದಾಹರಣೆಯೂ ಸಹ ಇದೆ.
ಇನ್ನು ಇಂದು ( ಡಿಸೆಂಬರ್ 7 ) ಭಾನುವಾರದ ಎಪಿಸೋಡ್‌ನ ಪ್ರೋಮೊವನ್ನು ಕಲರ್ಸ್ ಕನ್ನಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಪ್ರೋಮೊ ಭಾರೀ ಸದ್ದು ಮಾಡಿದೆ. ಕಿಚ್ಚ ಸುದೀಪ್ ಮನೆಯಲ್ಲಿರುವ ಸ್ಪರ್ಧಿಗಳನ್ನು ಕರೆದು ಬಿಗ್‌ಬಾಸ್‌ನ ಈ ಪಯಣದಲ್ಲಿ ಯಾವ ಸ್ಪರ್ಧಿ ತಮಗೆ ಏಣಿಯಾದರು ಹಾಗೂ ಯಾವ ಸ್ಪರ್ಧಿ ಹಾವಾದರು ಎಂಬ ಪ್ರಶ್ನೆ ಕೇಳಿದ್ದಾರೆ.
ಈ ಪ್ರಶ್ನೆಗೆ ವಿವಿಧ ಸ್ಪರ್ಧಿಗಳು ಉತ್ತರ ನೀಡಿದ್ದು, ರಘು ಹಾಗೂ ಅಶ್ವಿನಿ ಗೌಡ ಗಿಲ್ಲಿಗೆ ಹಾವಿನ ಪಟ್ಟ ಕೊಟ್ಟಿದ್ದಾರೆ. ರಘು ಗಿಲ್ಲಿ ಮನೆಗೆ ಬಂದಾಗಿನಿಂದ ನನ್ನ ವ್ಯಕ್ತಿತ್ವವನ್ನು ಬದಲಾಯಿಸಲು ಪ್ರಯತ್ನ ಮಾಡುತ್ತಲೇ ಇದ್ದಾನೆ ಎಂಬ ಕಾರಣವನ್ನು ನೀಡಿದರೆ, ಅಶ್ವಿನಿ ಗೌಡ ಮನಸ್ಸನ್ನು ಒಡೆಯುವಂತಹ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾನೆ ಎಂಬ ಕಾರಣವನ್ನು ಕೊಟ್ಟರು.
ಇನ್ನು ಇದೇ ಆಟದಲ್ಲಿ ಗಿಲ್ಲಿ ತನ್ನ ಪಯಣದಲ್ಲಿ ಕಾವ್ಯ ತನಗೆ ಏಣಿಯಾದಳು ಎಂಬ ಉತ್ತರವನ್ನು ನೀಡಿದ್ದಾರೆ. ಆದರೆ ಕಾವ್ಯ ಗಿಲ್ಲಿಗೆ ಹಾವಿನ ಪಟ್ಟ ನೀಡಿದ್ದಾರೆ. ತನ್ನನ್ನು ಕಾವು ಎನ್ನುವುದು ತನಗೆ ರೇಗಿಸುವುದು ಬೇಜಾರಾಗುತ್ತಿದೆ ಹಾಗೂ ಬೇರೆಯವರ ಕಣ್ಣಿಗೆ ಅದು ಬೇರೆ ರೀತಿ ಕಾಣುತ್ತಿದೆ ಎಂದು ಹೇಳಿದಾಗ ಅದನ್ನು ಅರ್ಥ ಮಾಡಿಕೊಂಡು ನಿಲ್ಲಿಸುತ್ತಾನೆ ಎಂದುಕೊಂಡಿದ್ದೆ ಎಂಬ ಕಾರಣವನ್ನು ನೀಡಿ ಕಾವ್ಯ ಗಿಲ್ಲಿಗೆ ಹಾವಿನ ಪಟ್ಟವನ್ನು ನೀಡಿದ್ದಾರೆ.
ಹೀಗೆ ಇಂದಿನ ಪ್ರೋಮೊದಲ್ಲಿ ಏಣಿ ಪಟ್ಟ ಕೊಟ್ಟ ಗಿಲ್ಲಿಗೆ ಕಾವ್ಯ ಹಾವಿನ ಪಟ್ಟವನ್ನು ಕೊಟ್ಟದ್ದನ್ನು ಕಂಡ ಪ್ರೇಕ್ಷರು ನೀನೇ ಸಾಕಿದ ಗಿಣಿ ನಿನ್ನನ್ನೇ ಹದ್ದಾಗಿ ಕುಕ್ಕಿತಲ್ಲೊ ಎಂದು ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


