ಬೆಂಗಳೂರು: ಸೇರಿಗೆ ಸವಾಸೇರು ಎಂಬಂತೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಕುರಿತು ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅತ್ತ ಕಾಂಗ್ರೆಸ್ ಹೈಕಮಾಂಡ್ ತಮ್ಮ ಜೇಬಿನಲ್ಲಿದೆ ಎನ್ನುವ ರೀತಿ ಗೃಹ ಸಚಿವ ಪರಮೇಶ್ವರ್ ಅವರ ಡಿನ್ನರ್ ಮೀಟಿಂಗನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲೇ ಕೂತು ಕ್ಯಾನ್ಸಲ್ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತ ಸಿಎಂ ಸಿದ್ದರಾಮಯ್ಯ ಬಣ ನಾವೇನು ಕಡಿಮೆ ಇಲ್ಲ ಎನ್ನುವಂತೆ ಕೌಂಟರ್ ಮೇಲೆ ಕೌಂಟರ್ ಕೊಡುತ್ತಿದೆ ಎಂದು ಲೇವಡಿ ಮಾಡಿದರು.
ಇನ್ನು ಸಚಿವ ಕೆ.ಎನ್.ರಾಜಣ್ಣ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೇ ಬಹಿರಂಗ ಸವಾಲು ಹಾಕಿದ್ದು, ಡಿನ್ನರ್ ಮೀಟಿಂಗ್ ಬಗ್ಗೆ ಬೇಜಾರು ಮಾಡಿಕೊಳ್ಳೋಕೆ ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೀವಾ? ಇವರೇನು ಎಸ್‌ಸಿ, ಎಸ್‌ಟಿ ವಿರೋಧಿಗಳಾ? ಇವೆಲ್ಲಾ ಬಹಳ ದಿವಸ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಯಾರ ಜೇಬಿನಲ್ಲಿದೆಯೋ, ಕಾಂಗ್ರೆಸ್ ಹೈಕಮಾಂಡ್ ಜೇಬು ತುಂಬಿಸುತ್ತಿರುವುದು ಯಾರೋ ಗೊತ್ತಿಲ್ಲ, ಆದರೇ ಸೇರಿಗೆ ಸವಾಸೇರು ಎಂದು ಕುರ್ಚಿಗಾಗಿ ನಡೆಸುತ್ತಿರುವ ಈ ಪೈಪೋಟಿಯನ್ನ, ಆಸಕ್ತಿಯನ್ನ ರಾಜ್ಯ ಕಾಂಗ್ರೆಸ್ ಸಚಿವರು ತಮ್ಮ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ, ರಾಜ್ಯದ ಅಭಿವೃದ್ಧಿಯಲ್ಲಿ ತೋರಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಲಹೆ ನೀಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಡಿನ್ನರ್ ಮೀಟಿಂಗ್ ವಿಚಾರ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ವಿಪಕ್ಷಗಳಿಗೆ ಒಳ್ಳೆಯ ಅಸ್ತ್ರ ಸಿಕ್ಕಿದಂತಾಗಿದೆ. ವಿಪಕ್ಷಗಳು ದಿನದಿಂದ ದಿನಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದನ್ನು ಮುಂದುವರಿಸಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


