ಲಕ್ನೋ: ಇಲ್ಲಿನ ಏಕನ ಕ್ರೀಡಾಂಗಣದಲ್ಲಿ ಇಂದು (ಮಾರ್ಚ್ 8) ವುಮೆನ್ಸ್ ಪ್ರೀಮಿಯರ್ ಲೀಗ್‌ನ 18ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಯುಪಿ ವಾರಿಯರ್ಸ್ ಮುಖಾಮುಖಿಯಾಗಿವೆ.
ಇನ್ನು ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಅತ್ಯುತ್ತಮ ಆರಂಭ ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರು ನಂತರ ಹೋಮ್ ಗ್ರೌಂಡ್‌ನಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಸೋತು ಸದ್ಯ ಪ್ಲೇಆಫ್ ಟಿಕೆಟ್‌ಗಾಗಿ ಉಳಿದ ತನ್ನೆರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಪರಿಸ್ಥಿತಿಗೆ ಬಂದು ತಲುಪಿದೆ.
ಹೀಗಾಗಿ ಇಂದಿನ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿದೆ. ಆದರೆ ಇಂತಹ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಬರೋಬ್ಬರಿ 225 ರನ್ ನೀಡಿದ್ದು ಭಾರೀ ಒತ್ತಡಕ್ಕೆ ಸಿಲುಕಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿ ಬೆಂಗಳೂರಿಗೆ 226 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಯುಪಿ ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ 39 ರನ್ ಗಳಿಸಿದರೆ, ಜಾರ್ಜಿಯಾ ವಾಲ್ ಕೊನೆಯವರೆಗೂ ಅಬ್ಬರದ ಬ್ಯಾಟಿಂಗ್ ನಡೆಸಿ ಶತಕ ವಂಚಿತರಾದರು. ಜಾರ್ಜಿಯಾ ವಾಲ್ 56 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 99 ರನ್ ಗಳಿಸಿದರು.
ಇನ್ನುಳಿದಂತೆ ಕಿರಣ್ ನವ್‌ಗೈರ್ 46, ಸಿನೆಲ್ ಹೆನ್ರಿ 19, ಸೋಫಿ ಎಕ್ಸೆಲ್‌ಟನ್ 13 ಹಾಗೂ ದೀಪ್ತಿ ಶರ್ಮಾ ಅಜೇಯ 1 ರನ್ ಗಳಿಸಿದರು.
ಅರ್‌ಸಿಬಿ ಪರ ಜಾರ್ಜಿಯಾ ವಾರೆಹಮ್ ಎರಡು ವಿಕೆಟ್ ಹಾಗೂ ಚಾರ್ಲಿ ಡೀನ್ ಒಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


