ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ 7 ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರ ರೈತರ ಹೋರಾಟಕ್ಕೆ ಸರ್ಕಾರ ಮಣಿದಿತ್ತು. ಕಬ್ಬಿಗೆ ದರ ನಿಗದಿ ಮಾಡಿ ಘೋಷಣೆ ಮಾಡಲಾಗಿತ್ತು. ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರೊಂದಿಗೆ ಚರ್ಚಿಸಿ, ಅವರೆಲ್ಲರ ಸಮ್ಮುಖದಲ್ಲಿಯೇ ಪ್ರತಿ ಟನ್ ಕಬ್ಬಿಗೆ ರೂ. 3,300 ದರ ನಿಗದಿಯ ತೀರ್ಮಾನವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಈ ಕುರಿತು ಶನಿವಾರ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಶಾಂತರಾಮ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಸಕ್ಕರೆ) ಆದೇಶವನ್ನು ಹೊರಡಿಸಿದ್ದಾರೆ. ಆದೇಶವು 2025-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹೆಚ್ಚುವರಿ ಕಬ್ಬು ಬೆಲೆ ನಿಗದಿಪಡಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಪ್ರಸ್ತಾವನೆ: 2025-26ನೇ ಸಕ್ಕರೆ ಹಂಗಾಮಿನಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ (Fair and Remunerative Price) ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನಿಗದಿಗೊಳಿಸಿದೆ.
- ಶೇಕಡ 10.25ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಕ್ವಿಂಟಾಲ್ ಕಬ್ಬಿಗೆ ರೂ.3,550
- ಶೇಕಡ 10.25ಕ್ಕೆ ಮೇಲ್ಪಟ್ಟ ಇಳುವರಿಗೆ ತದನಂತರದ ಶೇಕಡ 0.1ರಷ್ಟು ಇಳುವರಿಗೆ ಪ್ರತಿ ಕ್ವಿಂಟಾಲ್ ಕಬ್ಬಿಗೆ ರೂ.3,46 ರಂರೆ ಹೆಚ್ಚುವರಿ ಬೆಲೆ.
- ಶೇಕಡ 10.25ಕ್ಕಿಂತ ಕಡಿಮೆ ಹಾಗೂ ಶೇಕಡ 9.5ಕ್ಕಿಂತ ಮೇಲ್ಪಟ್ಟ ಇಳುವರಿಯನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಶೇಕಡ 0.1 ರಷ್ಟು ಇಳುವರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.3.46ರಷ್ಟು ಪ್ರಮಾಣದಲ್ಲಿ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ಕಡಿಮೆ ಮಾಡುವುದು.
- ಶೇಕಡ 9.5ರಷ್ಟು ಅಥವಾ 9.50ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಕಾರ್ಖಾನೆಗಳಿಗೆ ಪ್ರತಿ ಮೆ.ಟನ್‌ಗೆ ರೂ.3290 ಗಳ ನ್ಯಾಯ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸುವುದು.
ಆದೇಶದಲ್ಲಿ 20024-25ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು ಪಡೆದ ಸಕ್ಕರೆ ಇಳುವರಿಯನ್ನು ಆಧರಿಸಿ, ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ರಾಜ್ಯದ ಸಕ್ಕರೆ ಕಾರ್ಖಾನೆಗಳು 2025-26ನೇ ಹಂಗಾಮಿನಲ್ಲಿ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಪಡಿಸಿ, ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಆದೇಶಿಸಿರುತ್ತಾರೆ.
ದಿನಾಂಕ 10.06.2025ರಂದು ಜರುಗಿದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ನಿರ್ಣಯಿಸಿದಂತೆ 2025-26ನೇ ಹಂಗಾಮಿನಲ್ಲಿ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಅನುಸರಿಸಬೇಕಾದ ಕಬ್ಬು ಕಟಾವು ಮತ್ತು ಸಾಗಾಣಿಕೆ ವಚ್ಚದ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು.
ಕೇಂದ್ರ ಸರ್ಕಾರವು ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ ಮಾರ್ಗಸೂಚಿಗಳು ನಾಯಯುತವಾಗಿ ಇಲ್ಲದೇ ಇರುವ ಕಾರಣ ರೈತರು ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲವೆಂದು ಮತ್ತು ಉತ್ಪಾದನೆಗೆ ಆಗುವ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳದೇ ಇಳುವರಿ (Recovery) ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತಿರುವುದರಿಂದ ಇಳುವರಿ ವರದಿಯು ಕೂಡ ಪಾರದರ್ಶಕವಾಗಿರುವುದಿಲ್ಲವೆಂದು ರೈತರಿಗೆ ಕಬ್ಬಿನ ದರದಲ್ಲಿ ವ್ಯತ್ಯಾಸವಾಗುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಸಮಸ್ಯೆಯನ್ನು ಪರಿಹರಿಸುವಂತೆ ಹಾಗೂ ಪ್ರಸ್ತುತ ವರ್ಷ ರೂ.3,500ಗಳ ಬೆಂಬಲ ಬೆಲೆಯನ್ನು ನೀಡುವಂತೆ ವಿನಂತಿಸಿರುತ್ತಾರೆ.
ದಿನಾಂಕ 07.11.2025ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲೀಕರು/ ಪ್ರತಿನಿಧಿಗಳೊಂದಿಗೆ ಮತ್ತು ರಾಜ್ಯದ ಕಬ್ಬು ಬೆಳಗಾರರು ಹಾಗೂ ರೈತ ಸಂಘಟನೆಗಳ ಮುಖಂಡರು ಮತ್ತು ಪ್ರತಿನಿಧಿಗಳೊಂದಿಗೆ ಸುಧೀರ್ಘವಾಗಿ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ, ರಾಜ್ಯದ ಉತ್ತರ ಭಾಗದ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿರುವುದರಿಂದ ರೈತರು ತಮ್ಮ ಕಬ್ಬಿಗೆ ಹೆಚ್ಚಿನ ಬೆಲೆಯನ್ನು ನಿಗದಿಪಡಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಕುರಿತು ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳು, ಬೆಳಗಾವಿ ಇವರು ನಡೆಸಿರುವ ಸಭೆಗಳ ಕುರಿತು ಹಾಗೂ ಪ್ರತಿಭಟನಾ ಸ್ಥಳದಲ್ಲಿ ರೈತ ಪ್ರತಿನಿಧಿಗಳೊಂದಿಗೆ ನಡೆಸಿದ ಸಂಧಾನ ಸಭೆಗಳ ಕುರಿತು ಚರ್ಚಿಸಲಾಯಿತು.
ರೈತರ ಪ್ರತಿಭಟನೆಗಳು ಬಾಗಲಕೋಟೆ, ವಿಜಯಪುರ, ಕಲಬುರಗಿ, ಹಾವೇರಿ ಮತ್ತು ಇತರ ಜಿಲ್ಲೆಗಳಲ್ಲಿಯೂ ತೀವ್ರ ಸ್ವರೂಪ ಪಡೆದುಕೊಂಡಿರುವ ಕುರಿತು ಜಿಲ್ಲಾಧಿಕಾರಿಗಳು ವಿಡಿಯೋ ಕಾರೆನ್ಸ್ ಮೂಲಕ ಸಭೆಯ ಗಮನಕ್ಕೆ ತಂದಿರುತ್ತಾರೆ. ಕೇಂದ್ರ ಸರ್ಕಾರವು ರೈತರ ಕಬ್ಬಿಗೆ ನಿಗದಿಪಡಿಸಿರುವ ಎಫ್.ಆರ್.ಪಿ.ಯು ರೈತರಿಗೆ ಒಪ್ಪಿಗೆಯಾಗದೇ ಇರುವುದರಿಂದ ಮತ್ತು ಅನೇಕ ಕಾರ್ಖಾನೆಗಳು ರೈತರೊಂದಿಗೆ ಸಹಕಾರ ಮನೋಭಾವದೊಂದಿಗೆ ವ್ಯವಹರಿಸುವ ಉದ್ದೇಶದಿಂದ ಕೇಂದ ಸರ್ಕಾರವು ನಿಗದಿಪಡಿಸಿರುವ ಎಫ್.ಆರ್.ಪಿ ಗಿಂತ ಹೆಚ್ಚಿನ ದರವನ್ನು ಹಿಂದಿನ ವರ್ಷಗಳಲ್ಲಿ ನೀಡಿರುವುದನ್ನು ಪರಿಗಣಿಸಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 2025-264 ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ಇಳುವರಿ ಆಧಾರದ ಮೇಲೆ ನಿಗದಿಪಡಿಸಲು ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವನ್ನು ನೀಡಲು ಸಭೆಯ ತೀರ್ಮಾನಿಸಿರುತ್ತದೆ.
ಅದರಂತೆ ಸರ್ಕಾರದ ಈ ಆದೇಶ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2005-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ನಿಗದಿಪಡಿಸಲು ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವನ್ನು ಒಂದು ಬಾರಿಯ ಕ್ರಮವಾಗಿ ನಿಗದಿಪಡಿಸಿ ಆದೇಶಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


