ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 5ನೇ ಟಿ–20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಬ್ರಿಸ್ಬೇನ್‌ನಲ್ಲಿ ಮಳೆಯ ಕಾರಣ ಪಂದ್ಯವನ್ನು ರದ್ದು ಮಾಡಲಾಗಿದ್ದು, ಭಾರತ ತಂಡ ಸರಣಿಯನ್ನು 2-1 ಅಂತರದಿಂದ ಗೆದ್ದಿದೆ.
ಇಂದಿನ ಟಿ–20 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಉತ್ಸಾಹದಲ್ಲಿ ಟೀಮ್ ಇಂಡಿಯಾ ಇತ್ತು. ವರುಣ ದೇವ ಸಹ ಇದಕ್ಕೆ ಸಹಕಾರ ನೀಡಿದ್ದು, ಸರಣಿ ಕೈವಶವಾಗಿದೆ.
1000 ರನ್‌ಗಳ ಸರದಾರ: ಶನಿವಾರದ ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ 14 ರನ್‌ಗಳಿಸುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ 1000 ರನ್ ಗಡಿ ದಾಟಿದರು. ಕೇವಲ 28 ಇನ್ನಿಂಗ್ಸ್‌ನಲ್ಲಿ ಶರ್ಮಾ ಈ ಸಾವಿರ ರನ್ ಗಡಿಯನ್ನು ದಾಟಿದ್ದಾರೆ.
ಟಿ-20 ಕ್ರಿಕೆಟ್‌ನಲ್ಲಿ ಕಡಿಮೆ ಪಂದ್ಯದಲ್ಲಿ 1000 ರನ್ ಗಡಿ ದಾಟಿದ ಭಾರತದ 2ನೇ ಆಟಗಾರ ಅಭಿಷೇಕ್ ಶರ್ಮಾ. ವಿರಾಟ್ ಕೊಹ್ಲಿ ಕೇವಲ 27 ಪಂದ್ಯದಲ್ಲಿ ಸಾವಿರ ರನ್‌ಗಳ ಗಡಿಯನ್ನು ದಾಟಿದ್ದರು. 528 ಎಸೆತದಲ್ಲಿ 1000 ರನ್ ಗಡಿದಾಟುವ ಮೂಲಕ ಶರ್ಮಾ 573 ಎಸೆತದಲ್ಲಿ ಸಾವಿರ ರನ್ ಬಾರಿಸಿದ್ದ ಸೂರ್ಯಕುಮಾರ್ ಯಾದವ್ ದಾಖಲೆ ಮುರಿದಿದ್ದಾರೆ.
ಸರಣಿ ಕೈವಶ: ಇಂದು ಮಧ್ಯಾಹ್ನ ಬ್ರಿಸ್ಬೇನ್‌ನಲ್ಲಿ ಪಂದ್ಯ ಆರಂಭವಾಗಿತ್ತು. ಭಾರತ ತಂಡ ಕೇವಲ 4.5 ಓವರ್‌ಗಳ ಆಟವಾಡಿ 52 ರನ್ ಸಿಡಿಸಿತ್ತು. ಗಿಲ್ ಮತ್ತು ಅಭಿಷೇಕ್ ಶರ್ಮಾ ಜೋಡಿ 50 ರನ್‌ಗಳ ಜೊತೆಯಾಟವಾಡಿತ್ತು. ಅಷ್ಟರಲ್ಲಿ ಮಳೆ ಪ್ರಾರಂಭವಾಯಿತು.
5ನೇ ಟಿ-20 ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಸರಣಿ ಆರಂಭವಾದ ರೀತಿಯಲ್ಲೇ ಮುಗಿದಿದೆ. ಮಳೆಯಿಂದ ಯಾವುದೇ ಫಲಿತಾಂಶವಿಲ್ಲದೆ ಪಂದ್ಯ ರದ್ದು ಮಾಡಲಾಗಿದೆ. ಭಾರತ 3ನೇ ಮತ್ತು 4ನೇ ಪಂದ್ಯಗಳನ್ನು ಗೆದ್ದಿದ್ದರಿಂದ ಸರಣಿಯನ್ನು 2-1 ಅಂತರದಿಂದ ತಮ್ಮದಾಗಿಸಿಕೊಂಡಿದೆ ಎಂದು ಘೋಷಣೆ ಮಾಡಲಾಗಿದೆ.
ಭಾರತ ಇಂದಿನ ಪಂದ್ಯ ಗೆಲ್ಲುವ ಮೂಲಕ ವಿದೇಶದಲ್ಲಿ ಮತ್ತೊಂದು ಸರಣಿ ಗೆಲುವಿನ ನಿರೀಕ್ಷೆಯಲ್ಲಿತ್ತು. ತಂಡದ ಬ್ಯಾಟಿಂಗ್ 5ನೇ ಪಂದ್ಯದಲ್ಲಿ ಸುಧಾರಿಸಲಿದೆ ಎಂದೂ ಅಂದಾಜಿಸಲಾಗಿತ್ತು.
ಭಾರತ ಈಗಾಗಲೇ ಸರಣಿಯಲ್ಲಿ 2-1ರ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಭಾರತ 17 ವರ್ಷಗಳಿಂದ ಒಮ್ಮೆಯೂ ಸರಣಿಯನ್ನು ಸೋಲದೆ ದಾಖಲೆಯನ್ನು ಕಾಪಾಡಿಕೊಂಡು ಬಂದಿತ್ತು. ನಾಯಕ ಸೂರ್ಯಕುಮಾರ್ ಯಾದವ್ ಪಡೆ ಇದನ್ನು ಈಗ ಮುಂದುವರೆಸಿಕೊಂಡು ಹೋಗಿದೆ.
2008ರಲ್ಲಿ ಭಾರತ ಕೊನೆಯದಾಗಿ ಆಸ್ಟ್ರೇಲಿಯಾದಲ್ಲಿ ಟಿ-20 ಸರಣಿ ಸೋತಿತ್ತು. ಬಳಿಕ ಆಡಿದ ನಾಲ್ಕು ಸರಣಿಗಳಲ್ಲಿ ಜಯಗಳಿಸಿತ್ತು. 2012, 2018ರ ಸರಣಿಗಳು 1-1ರಲ್ಲಿ ಸಮಬಲವಾಗಿತ್ತು.
2016ರಲ್ಲಿ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಲಾಗಿತ್ತು. 2020ರಲ್ಲಿ 2-1ರಿಂದ ಗೆದ್ದಿರುವುದು ಕೊನೆಯ ಸರಣಿಯಾಗಿತ್ತು. ಬ್ರಿಸ್ಬೇನ್‌ನ ಗಾಬಾದಲ್ಲಿ 2018ರಲ್ಲಿ ಎರಡು ತಂಡಗಳು ಕೊನೆಯ ಬಾರಿ ಟಿ-20 ಆಡಿದ್ದವು. ಪಂದ್ಯದಲ್ಲಿ ಆಸೀಸ್ 4 ರನ್‌ಗಳ ಜಯಗಳಿಸಿತ್ತು.
ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿತ್ತು. ಆದರೆ ಬ್ಯಾಟಿಂಗ್ ಇನ್ನಷ್ಟು ಬಲಿಷ್ಠವಾಗಬೇಕು ಎಂದು ವಿಶ್ಲೇಷಿಸಲಾಗಿತ್ತು. ವಿದೇಶದಲ್ಲಿ ವರುಣ್, ಅಕ್ಷರ್ ಮತ್ತು ಸುಂದರ್ ಸೇರಿ 4ನೇ ಪಂದ್ಯದಲ್ಲಿ 6 ವಿಕೆಟ್ ಕಿತ್ತಿದ್ದರು. ಭಾರತದ ಸ್ಪಿನ್ ದಾಳಿಗೆ ಆಸೀಸ್ ತತ್ತರಿಸಿತ್ತು.
ಗಿಲ್ ಕಳೆದ 7 ಪಂದ್ಯಗಳಿಂದ ಅರ್ಧ ಶತಕಗಳಿಸಿರಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಆಟದ ಟ್ರೈಲರ್ ಮಾತ್ರ ತೋರಿಸಿದ್ದರು. ತಿಲಕ್ ವರ್ಮಾ ಸಹ ಲಯ ಕಂಡುಕೊಂಡಿರಲಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ. ಇದಕ್ಕೆ ಭಾರತ ತಯಾರಾಗುತ್ತಿದೆ. ಆದರೆ ಬ್ಯಾಟಿಂಗ್ ವೈಫಲ್ಯ ತಂಡವನ್ನು ಕಾಡುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


