ಚುನಾವಣಾ ಅಕ್ರಮ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಡಿಸೆಂಬರ್ 8 ರಿಂದ 19ರ ತನಕ ಚಳಿಗಾಲದ ಅಧಿವೇಶನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರವೇ ಬೆಳಗಾವಿ ತಲುಪಿದ್ದಾರೆ.
ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಸುಪ್ರೀಂಕೋರ್ಟ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಒಂದು ಕಡೆ ನಾಯಕತ್ವ ಬದಲಾವಣೆ ಚರ್ಚೆಯನ್ನು ಎದುರಿಸುತ್ತಿರುವ ಸಿದ್ದರಾಮಯ್ಯ ಈಗ ಚುನಾವಣಾ ಅಕ್ರಮದ ಕುರಿತ ಅರ್ಜಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಬೇಕಿದೆ.
2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಶಂಕರ್ ಎಂಬುವವರು ಮೊದಲು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಈ ಅರ್ಜಿಯವನ್ನು ವಜಾಗೊಳಿಸಿತ್ತು.
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಶಂಕರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮನಾಥ ನೇತೃತ್ವದ ದ್ವಿಸದಸ್ಯ ಪೀಠ ಸಿದ್ದರಾಮಯ್ಯ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ವರುಣದಿಂದ ಸಿದ್ದರಾಮಯ್ಯ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಶಂಕರ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಚುನಾವಣೆ ವೇಳೆ ಕೊಟ್ಟ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾದ 5 ಗ್ಯಾರಂಟಿ ಭರವಸೆಗಳು ಪ್ರಜಾ ಪ್ರತಿನಿಧಿ ಕಾಯ್ದೆ ಪ್ರಕಾರ ಲಂಚ ಮತ್ತು ಭ್ರಷ್ಟಾಚಾರ ಎನ್ನಿಸಿಕೊಳ್ಳುತ್ತದೆ.
ಸಿದ್ದರಾಮಯ್ಯ ಒಪ್ಪಿಗೆ ಪ್ರಕಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅವರು ಕೂಡಾ ಭ್ರಷ್ಟಾಚಾರ ನಡೆಸಿದ್ದಾರೆ. ಆದ್ದರಿಂದ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಲಾಗಿದೆ. ಅಲ್ಲದೇ 6 ವರ್ಷ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಕೋರಲಾಗಿದೆ.
2025ರ ಏಪ್ರಿಲ್‌ನಲ್ಲಿ ಕರ್ನಾಟಕ ಹೈಕೋರ್ಟ್ ಶಂಕರ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ತಮ್ಮ ತೀರ್ಪಿನಲ್ಲಿ ಚುನಾವಣಾ ಭರವಸೆಗಳನ್ನು ಭ್ರಷ್ಟಾಚಾರ ಎನ್ನಲಾಗದು. ಅರ್ಜಿಯಲ್ಲಿನ ಪ್ಯಾರಾಗಳ ಸಂಖ್ಯೆ ಮತ್ತು ಪರಿಶೀಲನಾ ಅಫಿಡವಿಟ್ ನಡುವೆ ವ್ಯತ್ಯಾಸಗಳಿವೆ. ರಾಜ್ಯದ ಮುಖ್ಯ ಕಾರ್ಯದರ್ಶಿಯ ಹೆಸರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದರು.
ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಸಿದ್ದರಾಮಯ್ಯ ಪರ ವಕೀಲರು, ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆ ಪಕ್ಷಕ್ಕೆ ಸೇರಿದ್ದು, ಇದನ್ನು ನನ್ನ ವೆಚ್ಚಕ್ಕೆ ಸೇರಿಸಬಹುದೇ?. ಇದು ನನ್ನ ಚುನಾವಣಾ ವೆಚ್ಚಕ್ಕೆ ಸೇರುತ್ತದೆಯೇ?, ನಾನು ಮುಖ್ಯಮಂತ್ರಿಯಾದ ಮೇಲೆ ಇದು ಅನ್ವಯಿಸುವುದೇ? ಎಂದು ವಾದಿಸಿದದರು.
ಚುನಾವಣೆ ಗೆದ್ದ ಸಿದ್ದರಾಮಯ್ಯ: 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 1,19,816 ಮತಗಳನ್ನು ಪಡೆದು ಅವರು ಚುನಾವಣೆಯಲ್ಲಿ ಜಯಗಳಿಸಿದ್ದರು. ಸಿದ್ದರಾಮಯ್ಯ ಎದುರಾಳಿಯಾಗಿ ಬಿಜೆಪಿಯಿಂದ ವಿ.ಸೋಮಣ್ಣ ಸ್ಪರ್ಧಿಸಿದ್ದರು. ಅವರು 73,653 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಮತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಕಣಕ್ಕಿಳಿದಿದ್ದರು. ವರುಣ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟಿದ್ದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದ ಅವರು ಬಾದಾಮಿಯಲ್ಲಿ 67,599 ಮತಗಳನ್ನು ಪಡೆದು ಗೆದ್ದಿದ್ದರು. ಕ್ಷೇತ್ರದಲ್ಲಿ ಬಿಜೆಪಿಯ ಬಿ.ಶ್ರೀರಾಮುಲು 65,903 ಮತಗಳನ್ನು ಪಡೆದು ಸಿದ್ದರಾಮಯ್ಯಗೆ ಪ್ರಬಲ ಪೈಪೋಟಿ ನೀಡಿದ್ದರು.
ಆದರೆ ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಿದ್ದರು. ಪುನಃ ಮೈಸೂರಿನ ವರುಣ ಕ್ಷೇತ್ರಕ್ಕೆ ಆಗಮಿಸಿದ್ದರು. ಬಿಜೆಪಿ ಬೆಂಗಳೂರಿನಿಂದ ವಿ.ಸೋಮಣ್ಣ ಅವರನ್ನು ವರುಣ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸುವ ಮೂಲಕ ಚುನಾವಣಾ ಕಣದ ರಂಗನ್ನು ಹೆಚ್ಚಿಸಿತ್ತು. ಅಂತಿಮವಾಗಿ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


