ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಕಾಂಗ್ರೆಸ್ ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಮುಖ್ಯಮಂತ್ರಿಯಾಗಲು ಆಕಾಂಕ್ಷಿಗಳಿಂದ ಪಕ್ಷವು ಸೂಟ್‌ಕೇಸ್‌ನಲ್ಲಿ 500 ಕೋಟಿ ರೂ.ಗಳನ್ನು ಪಡೆಯುತ್ತದೆ ಎಂದು ಅವರು ಹೇಳಿಕೆ ನೀಡಿದ್ದು ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ತಕ್ಷಣದಿಂದಲೇ ಜಾರಿಗೆ ಬರುವಂತೆ ಪಂಜಾಬ್ ಕಾಂಗ್ರೆಸ್ ನವಜೋತ್ ಕೌರ್ ಸಿಧು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಸೋಮವಾರ ಸಂಜೆ ಆದೇಶವನ್ನು ಹೊರಡಿಸಿದೆ.
ನವಜೋತ್ ಕೌರ್ ಸಿಧು ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಪತ್ನಿ. ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥರಾದ ನವಜೋತ್ ಸಿಂಗ್ ಸಿಧು ಪತ್ನಿಯ ಹೇಳಿಕೆ ಪಂಜಾಬ್ ರಾಜಕೀಯದಲ್ಲಿ ಮತ್ತು ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿತ್ತು.
ಎರಡು ದಿನಗಳ ಹಿಂದೆ ನವಜೋತ್ ಕೌರ್ ಸಿಧು ಪಂಜಾಬ್‌ನಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿಯಾಗಲು 500 ಕೋಟಿ ರೂ. ನೀಡಬೇಕು ಎಂದು ಹೇಳಿದ್ದರು. ಆದ್ದರಿಂದ ನವಜೋತ್ ಸಿಂಗ್ ಸಿಧು ಅವರು ಸಕ್ರಿಯ ರಾಜಕೀಯದಿಂದ ದೂರವಾದರು ಎಂದು ಹೇಳಿದ್ದರು.
ನವಜೋತ್ ಕೌರ್ ಸಿಧು ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಬಿಜೆಪಿ ಮತ್ತು ಎಎಪಿ ಪಕ್ಷಗಳು ಕಾಂಗ್ರೆಸ್ ಪಕ್ಷದ ಕಾರ್ಯ ವೈಖರಿ ಕುರಿತು ಟೀಕೆಗಳನ್ನು ಮಾಡಿದ್ದವು. ನಂತರ ನವಜೋತ್ ಕೌರ್ ಸಿಧು ತನ್ನ ಹೇಳಿಕೆಗಳನ್ನು ತಿರುಚಲಾಗಿದೆಯೆಂದು ಆರೋಪಿಸಿದ್ದರು.
ನಮ್ಮ ಕಾಂಗ್ರೆಸ್ ಪಕ್ಷವು ಎಂದಿಗೂ ನಮ್ಮಿಂದ ಏನನ್ನೂ ಬೇಡಲಿಲ್ಲ ಎಂಬ ಹೇಳಿಕೆಗೆ ತಪ್ಪು ಅರ್ಥ ನೀಡಿರುವುದನ್ನು ನೋಡಿ ನಾನು ಆಶ್ಚರ್ಯಚಕಿತಳಾಗಿದ್ದೇನೆ. ನವಜೋತ್‌ರನ್ನು ಬೇರೆ ಯಾವುದೇ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡುವ ಕುರಿತು ಕೇಳಿದಾಗ, ಮುಖ್ಯಮಂತ್ರಿ ಸ್ಥಾನಕ್ಕೆ ನಾವು ಹಣ ನೀಡುವ ಹಾಗಿಲ್ಲ ಎಂದು ನಾನು ಹೇಳಿದ್ದೆ ಎಂದು ಕೌರ್ ಸ್ಪಷ್ಟಪಡಿಸಿದ್ದರು.
ಸೋಮವಾರ ಸಂಜೆ ಪಂಜಾಬ್ ಕಾಂಗ್ರೆಸ್ ನವಜೋತ್ ಕೌರ್ ಸಿಧು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶವನ್ನು ಹೊರಡಿಸಿದೆ. ಆದರೆ ಯಾವ ಕಾರಣಕ್ಕೆ ಅಮಾನತು ಮಾಡಲಾಗುತ್ತಿದೆ? ಎಂದು ಆದೇಶದಲ್ಲಿ ತಿಳಿಸಿಲ್ಲ.
ಶನಿವಾರ ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ್ದ ನವಜೋತ್ ಕೌರ್ ಸಿಧು, ನವಜೋತ್ ಸಿಂಗ್ ಸಿಧು ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣ ಮಾಡಿದರೆ ಮಾತ್ರ ಅವರು ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ ಎಂದು ಹೇಳಿದ್ದರು.
ಸದ್ಯ ನವಜೋತ್ ಸಿಂಗ್ ಸಿಧು ರಾಜಕೀಯದಲ್ಲಿ ಸಕ್ರಿಯರಾಗಿಲ್ಲ. 2024ರ ಲೋಕಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿಯೂ ಅವರು ಸಕ್ರಿಯರಾಗಿ ಪ್ರಚಾರವನ್ನು ಕೈಗೊಂಡಿರಲಿಲ್ಲ. ನವಜೋತ್ ಕೌರ್ ಸಿಧು ಒಂದು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಪತಿ, ಪತ್ನಿ ಇಬ್ಬರು ಸಹ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.
ನವಜೋತ್ ಕೌರ್ ಸಿಧು ಅಮಾನತು ಕುರಿತು ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮರೇಂದ್ರ ಸಿಂಗ್ ರಾಜಾ ಎಕ್ಸ್‌ನಲ್ಲಿ ಆದೇಶ ಪತ್ರವನ್ನು ಹಾಕಿದ್ದಾರೆ. ಆದರೆ ಕಾರಣವನ್ನು ಮಾತ್ರ ಪತ್ರದಲ್ಲಿ ವಿವರಿಸಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


