‘ಲ್ಯಾಂಡ್‌ಲಾರ್ಡ್’ ಆಗಿ ರಾಜ್ ಬಿ.ಶೆಟ್ಟಿ, ದುನಿಯಾ ವಿಜಯ್ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾದ ಟೀಸರ್ ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.
‘ಲ್ಯಾಂಡ್‌ಲಾರ್ಡ್’ ಸಿನಿಮಾ ಜನವರಿಯಲ್ಲಿ ತೆರೆ ಕಾಣಲಿದೆ. ಸೋಮವಾರ ಬಿಡುಗಡೆಯಾದ ಚಿತ್ರದ ಟೀಸರ್ ಮಾಸ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ‘ಇದು ಅಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎಂದು ಚಿತ್ರಕ್ಕೆ ಟ್ಯಾಗ್ ಲೈನ್ ನೀಡಲಾಗಿದೆ.
ಸಿನಿಮಾದಲ್ಲಿ ದುನಿಯಾ ವಿಜಯ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಈ ಚಿತ್ರ ಅವರ ಪಾಲಿಗೆ ವಿಶೇಷವಾಗಿದೆ. ಏಕೆಂದರೆ ಚಿತ್ರದಲ್ಲಿ ಅವರ ಪುತ್ರಿ ರಿತನ್ಯ ಸಹ ಅಭಿನಯಿಸಿದ್ದಾರೆ. ರಾಜ್ ಬಿ.ಶೆಟ್ಟಿ, ರಾಕೇಶ್ ಅಡಿಗ, ಭಾವನಾ ರಾವ್, ರಚಿತಾ ರಾಮ್ ಸಹ ಚಿತ್ರದಲ್ಲಿದ್ದಾರೆ.
ಜನವರಿ 23, 2026ರಂದು ‘ಲ್ಯಾಂಡ್‌ಲಾರ್ಡ್’ ಸಿನಿಮಾ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಣೆ ಮಾಡಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಕುರಿತು ಪ್ರಚಾರವನ್ನು ಆರಂಭಿಸಲಾಗಿದೆ.
‘ಸು ಫಂ ಸೋ’ ಬಳಿಕ ರಾಜ್ ಬಿ.ಶೆಟ್ಟಿ ‘ಲ್ಯಾಂಡ್‌ಲಾರ್ಡ್’ ಮೂಲಕ ಜನರ ಮುಂದೆ ಬರುತ್ತಿದ್ದಾರೆ. ನೆಗೆಟೀವ್ ಶೇಡ್‌ನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರ ಪಾತ್ರ ಗಮನ ಸೆಳೆಯುತ್ತಿದೆ.
‘ಲ್ಯಾಂಡ್‌ಲಾರ್ಡ್’ ಸಿನಿಮಾದ ನಿರ್ಮಾಪಕ ದರ್ಶನ್ ಅಭಿನಯದ ‘ಸಾರಥಿ’ ಸಿನಿಮಾವನ್ನು ನಿರ್ಮಾಣ ಮಾಡಿರುವ ಕೆ.ವಿ.ಸತ್ಯಪ್ರಕಾಶ್. ‘ಕಾಟೇರ’ ಸಿನಿಮಾಗೆ ಕಥೆ ಬರೆದಿದ್ದ ಜಡೇಶ್ ನಿರ್ದೇಶಕರು.
‘ಜಂಟಲ್ ಮ್ಯಾನ್’, ‘ಗುರು ಶಿಷ್ಯರು’ ರೀತಿ ಹಿಟ್ ಸಿನಿಮಾಗಳನ್ನು ಕೊಟ್ಟ ಜಡೇಶ್ ಈ ಬಾರಿಯೂ ಭರವಸೆ ಮೂಡಿಸಿದ್ದಾರೆ. ರೈತರ ಸಮಸ್ಯೆಗಳು ಮತ್ತು ವ್ಯವಸ್ಥೆಯ ಜೊತೆಗಿನ ಸಂಘರ್ಷಗಳು ಚಿತ್ರದಲ್ಲಿವೆ ಎಂದು ಟೀಸರ್ ನೋಡಿದರೆ ಅನ್ನಿಸುತ್ತದೆ.
ಕೋಲಾರ ಭಾಗದ ಭೂ ಮಾಲೀಕರ ಕಿರುಕುಳ ಮತ್ತು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ನಾಯಕನ ಹಠವೇ ಚಿತ್ರದ ಕಥಾಹಂದರವಾಗಿದೆ. ದುನಿಯಾ ವಿಜಯ್ ಮತ್ತು ಅವರ ಪುತ್ರಿ ರಿತನ್ಯ ಸಹ ಚಿತ್ರದಲ್ಲಿ ಅಪ್ಪ-ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ಅಭಿನಯದ ಮೂಲಕ ಭರವಸೆ ಮೂಡಿಸಿದ್ದ ಶಿಶಿರ್ ಸಹ ಚಿತ್ರದಲ್ಲಿದ್ದಾರೆ. ಮಾಸ್ತಿ ಮತ್ತು ಶ್ರೀಕಾಂತ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಮಾಸ್ ಡೈಲಾಗ್ ಅನ್ನು ನಿರೀಕ್ಷಿಸಬಹುದು.
‘ಲ್ಯಾಂಡ್‌ಲಾರ್ಡ್’ ಸಿನಿಮಾಕ್ಕೆ ಮೊದಲು ರಾಚಯ್ಯ ಎಂದು ಹೆಸರಿಡಲು ಚಿಂತನೆ ನಡೆಸಲಾಗಿತ್ತು. ಬಳಿಕ ಅದಕ್ಕೆ ‘ಲ್ಯಾಂಡ್‌ಲಾರ್ಡ್’ ಎಂದು ನಾಮಕರಣ ಮಾಡಲಾಗಿದೆ. ಚಿತ್ರದಲ್ಲಿ ನಾಯಕನ ಹೆಸರು ರಾಚಯ್ಯ ಎಂದು ಅಂದಾಜಿಸಲಾಗಿದೆ.
ರಚಿತಾ ರಾಮ್ ಚಿತ್ರಕ್ಕೆ ನಾಯಕಿ. ನೆಲಮಂಗಲ ಬಳಿ ಅದ್ದೂರಿ ಸೆಟ್‌ನಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಬಿ.ಸುರೇಶ್, ಉಮಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಪೋಸ್ಟರ್ ಮೂಲಕ ‘ಲ್ಯಾಂಡ್‌ಲಾರ್ಡ್’ ಸಿನಿಮಾ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. ದೇವಾಲಯದ ಮುಂದೆ ರಥವೊಂದು ಹೊತ್ತಿ ಉರಿಯುತ್ತಿರುವ ಚಿತ್ರದ ಪೋಸ್ಟರ್ ಭಾರೀ ಕುತೂಹಲ ಹುಟ್ಟುಹಾಕಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


