ಬಿಜೆಪಿಯ ಚುನಾವಣಾ ಚಾಣಾಕ್ಷ, ಕೇಂದ್ರ ಸಚಿವ ಅಮಿತ್ ಶಾ 2026ರ ಟಾರ್ಗೆಟ್ ಫಿಕ್ಸ್ ಆಗಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 202 ಸೀಟುಗಳನ್ನು ಗೆದ್ದು ದಿಗ್ವಿಜಯ ಸಾಧಿಸಿದ ಬಳಿಕ ಅಮಿತ್ ಶಾ ಗಮನ 5 ರಾಜ್ಯದತ್ತ ಹೊರಳಿದೆ.
2026ರಲ್ಲಿ ದೇಶದ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ಮೊದಲು ಚುನಾವಣೆ ನಡೆಯುವುದು ಪಶ್ಚಿಮ ಬಂಗಾಳ ರಾಜ್ಯದಲ್ಲಿ. ಬಿಜೆಪಿ ನಾಯಕರ ಬಹುದೊಡ್ಡ ಟಾರ್ಗೆಟ್ ಸಹ ಮಮತಾ ಬ್ಯಾನರ್ಜ ಆಡಳಿತ ಇರುವ ಪಶ್ಚಿಮ ಬಂಗಾಳ.
ಅಮಿತ್ ಶಾ ಈಗಾಗಲೇ 5 ರಾಜ್ಯಗಳ ವಿಧಾನಸಭೆ ಚುನಾವಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ತಮ್ಮ ತಂಡದ ಜೊತೆ ಸೇರಿ ಚುನಾವಣಾಯ ರಣತಂತ್ರವನ್ನು ರೂಪಿಸುತ್ತಿದ್ದಾರೆ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಸಹ ದೆಹಲಿಯಲ್ಲಿ ಪಶ್ಚಿಮ ಬಂಗಾಳ ಸಂಸದರ ಜೊತೆ ಸಭೆಯನ್ನು ನಡೆಸಿದ್ದಾರೆ.
ಚುನಾವಣೆ ನಡೆಯುವ 5 ರಾಜ್ಯಗಳು: 2026ರಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಪೈಕಿ ಪಶ್ಚಿಮ ಬಂಗಾಳಕ್ಕೆ ಬಿಜೆಪಿ ನಾಯಕರು ಮೊದಲ ಆದ್ಯತೆ ನೀಡಲಿದ್ದಾರೆ.
ಡಿಸೆಂಬರ್ ಅಂತ್ಯಕ್ಕೆ ಅಮಿತ್ ಶಾ ಪಶ್ಚಿಮ ಬಂಗಾಳ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ., ಚುನಾವಣಾ ದಿನಾಂಕ ಘೋಷಣೆಗೂ ಮೊದಲು ಪ್ರತಿ ರಾಜ್ಯಕ್ಕೆ ತಿಂಗಳಿಗೆ ಮೂರು ದಿನಗಳ ಸಮಯವನ್ನು ಅವರು ನೀಡಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ, ಕೇರಳದಲ್ಲಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಸರ್ಕಾರ ಅಧಿಕಾರದಲ್ಲಿದೆ. ಆದ್ದರಿಂದ 2026ರಲ್ಲಿ ನಡೆಯುವ ಎಲ್ಲಾ ಚುನಾವಣೆಗಳು ಸಹ ಬಿಜೆಪಿ ಪಾಲಿಗೆ ಸವಾಲಿನದ್ದಾಗಿದೆ.
ಆದ್ದರಿಂದ ಅಮಿತ್ ಶಾ ಬಹಳ ಬೇಗನೇ ಚುನಾವಣಾ ತಯಾರಿಯನ್ನು ಪ್ರಾರಂಭಿಸಿದ್ದಾರೆ. ರಾಜ್ಯದ ಕೋರ್ ಕಮಿಟಿಗಳ ಸಭೆ, ಪ್ರಚಾರ ತಂತ್ರ, ಪ್ರಚಾರ ಸಭೆಗಳು ಸೇರಿದಂತೆ ಟಿಕೆಟ್ ಹಂಚಿಕೆ ತನಕ ಅಮಿತ್ ಶಾ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ತಮಿಳುನಾಡಿನಲ್ಲಿ ಈಗಾಗಲೇ ಎನ್‌ಡಿಎ ಮೈತ್ರಿಕೂಟಕ್ಕೆ ದಿ.ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ ಬೆಂಬಲವನ್ನು ಸೂಚಿಸಿದೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಇದನ್ನು ಬಿಜೆಪಿ ವಿರುದ್ಧದ ಅಸ್ತ್ರವಾಗಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಜನರ ಮನವೊಲಿಸುವ ಕಾರ್ಯ ಬಿಜೆಪಿ ನಾಯಕರ ಮೇಲಿದೆ.
ಕಳೆದ ವಾರ ಗುಜರಾತ್‌ನಲ್ಲಿ ಮಾತನಾಡಿದ ಅಮಿತ್ ಶಾ, “ವಿರೋಧ ಪಕ್ಷದಲ್ಲಿ ನಾಯಕರಿಲ್ಲ, ಅವರ ಪಕ್ಷದಲ್ಲಿ ಭವಿಷ್ಯದ ಕುರಿತು ಯಾವುದೇ ನೀತಿಗಳಿಲ್ಲ. ದೇಶದ ಯಾವುದೇ ರಾಜ್ಯದ ಜನರು ಅವರನ್ನು ಸ್ವೀಕಾರ ಮಾಡುವುದಿಲ್ಲ. ಡಿಎಂಕೆ, ಟಿಎಂಸಿ ಸಹ ಮುಂದಿನ ಚುನಾವಣೆಯಲ್ಲಿ ಸೋಲು ಕಾಣುತ್ತಾರೆ” ಎಂದು ಹೇಳಿದ್ದಾರೆ.
“ಬಿಜೆಪಿ ನೇತೃತ್ವದ ಮೈತ್ರಿಕೂಟ ಬಿಹಾರದಲ್ಲಿ ಬಹುದೊಡ್ಡ ಗೆಲುವನ್ನು ದಾಖಲು ಮಾಡಿದೆ. ಮುಂದಿನ ಚುನಾವಣೆಯಲ್ಲಿ ನಾವು ತಮಿಳುನಾಡು ಮತ್ತು ಪಶ್ವಿಮ ಬಂಗಾಳದಲ್ಲಿಯೂ ಗೆಲುವು ಸಾಧಿಸಲಿದ್ದೇವೆ” ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು. “ಈಗಲೇ ನಾನು ಮಮತಾ ಬ್ಯಾನರ್ಜಿ ಮತ್ತು ಸ್ಟಾಲಿನ್ ಅವರಿಗೆ ಸಿದ್ಧರಾಗಿರಲು ಹೇಳ ಬಯಸುತ್ತೇನೆ. ಬಿಹಾರದ ನಂತರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಎನ್‌ಡಿಎ ಜಯಭೇರಿ ಬಾರಿಸಲಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ, ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಜನರು ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ನಮ್ಮನ್ನು ಬೆಂಬಲಿಸಲಿದ್ದಾರೆ” ಎಂದರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


