Tuesday, July 7, 2026
spot_img
More
    spot_img
    HomeStateDistrictರೈತರ ಜೀವನಾಡಿ ತುಂಗಭದ್ರಾ ಡ್ಯಾಂ ಎಲ್ಲಾ ಕ್ರಸ್ಟ್ ಗೇಟ್ ಬದಲಾವಣೆಗೆ ಮುಹೂರ್ತ ಫಿಕ್ಸ್

    ರೈತರ ಜೀವನಾಡಿ ತುಂಗಭದ್ರಾ ಡ್ಯಾಂ ಎಲ್ಲಾ ಕ್ರಸ್ಟ್ ಗೇಟ್ ಬದಲಾವಣೆಗೆ ಮುಹೂರ್ತ ಫಿಕ್ಸ್

    ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸಲು 52 ಕೋಟಿ ರೂ.ಗಳ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಡಿಸೆಂಬರ್ 20 ರಿಂದ ಈ ಕಾಮಗಾರಿ ಪ್ರಾರಂಭವಾಗಲಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

    Advertisement

    ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಮುನಿರಾಬಾದ್‌ನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಅಭಿಯಂತರರ ಕಚೇರಿಯಲ್ಲಿ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕುರಿತು ಕೆ.ಎನ್.ಎನ್.ಎಲ್ ಅಧಿಕಾರಿಗಳು ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು.

    ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ಗೇಟ್‌ ಅಳವಡಿಸುವ ಕಾರ್ಯ ಡಿಸೆಂಬರ್ 20 ರಿಂದ ಆರಂಭವಾಗಬೇಕು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಆಗಿರುವ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.

    “ತುಂಗಭದ್ರಾ ಜಲಾಶಯವು ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿದ್ದು, ಪ್ರಸ್ತುತ ಹಳೆಯದಾಗಿರುವ ಜಲಾಶಯದ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸಲು 52 ಕೋಟಿ ರೂ.ಗಳ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಅದರಂತೆ ಪ್ರಸ್ತುತ ಕ್ರಸ್ಟ್ ಗೇಟ್‌ಗಳ ಡಿಸ್‌ಮೆಟಲಿಂಗ್ ಮತ್ತು ಇತರೆ ಕೆಲ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು” ಎಂದರು.

    “ಗುತ್ತಿಗೆದಾರರು ಎರಡು ತಂಡಗಳನ್ನು ರಚಿಸಿ ಅವುಗಳಿಂದ ಬೇಗನೆ ಕೆಲಸವನ್ನು ಮಾಡಿಸಿಕೊಳ್ಳಬೇಕು. ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಕಾರ್ಯ ಡಿಸೆಂಬರ್ 20 ರಿಂದ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಈ ಕಾಮಗಾರಿಯು ಕಡ್ಡಾಯವಾಗಿ ನಿಗದಿತ ಸಮಯದೊಳಗೆ ಪೂರ್ಣಗೊಳ್ಳಬೇಕೆಂದು” ಸಚಿವರು ಸೂಚನೆ ನೀಡಿದರು.

    ರೈತರು ನೀರು ತ್ಯಾಗ ಮಾಡಿದ್ದಾರೆ: “ನಮ್ಮ ರೈತರು 2ನೇ ಬೆಳೆಗೆ ನೀರನ್ನು ತ್ಯಾಗ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಅರಿತುಕೊಂಡು ಕೆಲಸಮಾಡಬೇಕು. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಸೇರಿ ಎಲ್ಲಾ 33 ಕ್ರಸ್ಟ್ ಗೇಟ್ ಗಳನ್ನು ಬದಲಾಯಿಸುವುದಾಗಿ ರೈತರಿಗೆ ಮಾತು ನೀಡಿದ್ದು, ಅದನ್ನು ಉಳಿಸಿಕೊಳ್ಳಬೇಕಿದೆ” ಎಂದರು.

    “2026ರ ಮುಂಗಾರು ವೇಳೆ ಜೂನ್ ಮಾಹೆಯಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತದೆ. ಮುಂಗಾರು ಬೆಳೆಗಳಿಗೆ ನೀರು ಒದಗಿಸಲು ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳುವುದು ಸಹ ನಮ್ಮ ಕರ್ತವ್ಯವಾಗಿದೆ” ಎಂದು ಹೇಳಿದರು.

    “ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ ಗೇಟ್ ಅಳವಡಿಸುವ ಕಾರ್ಯ ಮೇ ತಿಂಗಳೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಬೇಕು. ನೂತನ ಕ್ರಸ್ಟ್‌ ಗೇಟ್ ಅಳವಡಿಸುವ ಕಾರ್ಯ ನಡೆಯುವ ಸ್ಥಳಕ್ಕೆ ಯಾರನ್ನು ಬಿಡಬಾರದು. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಗಳಾಗದಂತೆ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕವಾಗಿ ಮಾಡಬೇಕು” ಎಂದು ಸಚಿವರು ನಿರ್ದೇಶನ ನೀಡಿದರು.

    ತುಂಗಭದ್ರಾ ಜಲಾಶಯವು ಒಟ್ಟಾರೆ 23 ಟಿ.ಎಂ.ಸಿಯಷ್ಟು ನೀರನ್ನು ಬಳಕೆ ಮಾಡಿದ್ದು, ಪ್ರಸ್ತುತ ಜಲಾಶಯದ ಮಟ್ಟವು 1621.72 ಅಡಿ ಇದೆ. ಕ್ರಸ್ಟ್‌ಗೇಟ್ ಗಳನ್ನು ಆಳವಡಿಸಲು 1613 ಅಡಿ ಇರಬೇಕು. ಉಳಿದ ಹೆಚ್ಚುವರಿ 9 ಅಡಿಯಷ್ಟು ನೀರನ್ನು ಬಳಸಿಕೊಂಡು ನಂತರ ಕ್ರಸ್ಟ್ ಗೇಟ್ ಆಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತದೆ.

    ಮೆ. ಹಾರ್ಡ್ ವೇರ್ ಟೂಲ್ಸ್ ಮತ್ತು ಮಷಿನರಿ ಪ್ರೇಜಕ್ಟ್ ಪ್ರೈ. ಲಿಮಿಟೆಡ್ ಅಹಮದಾಬಾದ್ ಗುಜರಾತ್ ಕಂಪನಿಯ ಪ್ರತಿನಿಧಿಗಳು ಮಾತನಾಡಿ, ತಮ್ಮ ಸಂಸ್ಥೆಯಿಂದ ಪಶ್ಚಿಮ ಬಂಗಾಳದ ಪರಾಕ್ ಬ್ಯಾರೇಜ್ ಜಲಾಶಯದಲ್ಲಿ 124 ಗೇಟ್ ಗಳನ್ನು ಅಳವಡಿಸಿದ್ದು, ಇವುಗಳು ತುಂಗಭದ್ರಾ ಜಲಾಶಯದ ಗೇಟ್ ಗಾತ್ರದ್ದೆ ಆಗಿವೆ.

    ಇದಲ್ಲದೆ ಕೆ.ಆರ್.ಎಸ್. ಜಲಾಶಯ ಮತ್ತು ನಾರಾಯಣಪುರ ಡ್ಯಾಂ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಿದ್ದೇವೆ. ಒಂದು ಮಾಹೆಯಲ್ಲಿ 6 ಗೇಟ್‌ಗಳಂತೆ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್‌ ಗೇಟ್ ಅಳವಡಿಸುವ ಕಾರ್ಯವನ್ನು ಜಲಾಶಯದ ಎಡ, ಬಲ ಮತ್ತು ಮಧ್ಯ ಭಾಗದಲ್ಲಿ ಒಂದೊಂದು ಸೇರಿ ಒಟ್ಟು ಮೂರು ತಂಡಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುವುದೆಂದು ಸಚಿವರಿಗೆ ಮಾಹಿತಿ ನೀಡಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading